ಹೊನ್ನಾವರ: ಪಟ್ಟಣ ಪಂಚಾಯತ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸರ್ಕಾರದ ಆದೇಶದಂತೆ ಜಲ ದೀಪಾವಳಿ ಕಾರ್ಯಕ್ರಮದಡಿ ‘ಮಹಿಳೆಯರಿಗೆ ನೀರು, ನೀರಿಗಾಗಿ ಮಹಿಳೆಯರು’ ಎನ್ನುವ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಕುಮಟಾದ ಸಾಂತಗಲ್ ಜಲಶುದ್ಧೀಕರಣ ಘಟಕದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ಮಹತ್ವದ ಕುರಿತು ಮಹಿಳಾ ಸ್ವ- ಸಹಾಯ ಸಂಘಕ್ಕೆ ತಿಳುವಳಿಕೆ ನೀಡುವುದಾಗಿದ್ದು, ಪ್ರಾತ್ಯಕ್ಷಿಕೆಯ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಟಿ.ನಾಯ್ಕ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ವಿವರಿಸಿದರು.
ಕಿರಿಯ ಎಂಜಿನಿಯರ್ ಉಮೇಶ ಮಡಿವಾಳ, ಕುಡಿಯುವ ನೀರು ಹೊಳೆಯಿಂದ ಹೇಗೆ ಸಂರಕ್ಷಿಸಿ, ಶುದ್ದೀಕರಿಸಿ ವಿತರಿಸಲಾಗುತ್ತದೆ ಎಂಬುವುದರ ಕುರಿತು ವಿವರಿಸಿದರು. ಸರ್ಕಾರದ ಈ ಕಾರ್ಯಕ್ರಮಕ್ಕೆ ಸ್ವ ಸಹಾಯ ಸಂಘದ ಮಹಿಳೆಯರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ, ಸಮುದಾಯ ಸಂಘಟನಾಧಿಕಾರಿ ಜೋನ್ ಲೋಪಿಸ್, ಶಕುಂತಲಾ ನಾಯ್ಕ ಹಾಗೂ ಸ್ವ ಸಹಾಯ ಸಂಘದ ಸದಸ್ಯರು, ಪಟ್ಟಣ ಪಂಚಾಯತ ಸಿಬ್ಬಂದಿಗಳು, ಘಟಕದ ಸಿಬ್ಬಂದಿಗಳು ಹಾಜರಿದ್ದರು.