ಯಲ್ಲಾಪುರ: ಚಿರತೆ ದಾಳಿಯಿಂದ ಕೊಟ್ಟಿಗೆಯಲ್ಲಿದ್ದ ಆಕಳ ಕರು ಅಸುನೀಗಿದ ಘಟನೆ ತಾಲೂಕಿನ ಉಮ್ಮಚಗಿ ಸಮೀಪದ ಕೋಟೆಮನೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಕೋಟೆಮನೆಯ ಗಜಾನನ ಸುಬ್ರಾಯ ಭಂಡಾರಿ ಎಂಬವರ ಕೊಟ್ಟಿಗೆಯಲ್ಲಿ ಚಿರತೆ ದಾಳಿಯಾಗಿದ್ದು, ಕರುವಿನ ಕುತ್ತಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಗಾಯವಾಗಿ ಕರು ಮೃತಪಟ್ಟಿದೆ. ಕರುವನ್ನು ಕೊಂದ ನಂತರ ಅದನ್ನು ಕೊಟ್ಟಿಗೆಯಿಂದ ಹೊರ ಸಾಗಿಸುವ ಪ್ರಯತ್ನ ಸಫಲವಾಗದೆ ಚಿರತೆ ಓಡಿ ಹೋಗಿದೆ.
ಗ್ರಾ.ಪಂ.ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಸದಸ್ಯ ಖೈತಾನ್ ಡಿಸೋಜ, ಕಾರ್ಯದರ್ಶಿ ಮೋಹನ ಉಮ್ಮಚ್ಗಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ಚಿರತೆ, ಹುಲಿ ದಾಳಿಗೆ ಸಾಕುಪ್ರಾಣಿಗಳು ಬಲಿಯಾಗುತ್ತಿದ್ದು, ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.