ಭಟ್ಕಳ: ಸಾಹಿತ್ಯ, ಕಾವ್ಯ ಸಿರಿಯ ಜೊತೆಯಲ್ಲಿ ಕಲಾಸಿರಿಯು ಬೆಳೆಯಲಿ ಎಂದು ಸಾಹಿತಿ ಡಾ.ಆರ್.ವಿ.ಸರಾಫ್ ಹೇಳಿದರು.
ಅವರು ಇಲ್ಲಿನ ಚಿತ್ರಾಪುರದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವಂಬರ್ ಮಾಸದುದ್ದಕ್ಕೂ ನಡೆಯುವ ಕನ್ನಡ ಕಾರ್ತಿಕ ಕಾರ್ಯಕ್ರಮದಡಿಯಲ್ಲಿ ಮನೆಯಂಗಳದಲ್ಲಿ ಕಾವ್ಯೋತ್ಸವ ಹಾಗೂ ಕಲಾಸಿರಿ ಪ್ರತಿಷ್ಠಾನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಸಯ್ಯದ್ ಝಮೀರುಲ್ಲ ಷರೀಫ್ ಮಾತನಾಡಿ, ಕಾವ್ಯ ಸೃಷ್ಟಿ ಸುಲಭವಲ್ಲ. ಪ್ರತಿಭೆ, ಸ್ಫೂರ್ತಿ, ಭಾಷಾ ಸಂಪತ್ತು ಇದ್ದಾಗ ಕಾವ್ಯ ಸೃಷ್ಟಿಯಾಗುತ್ತದೆ. ಹೊಸ ಹೊಸ ವಿಷಯ ಆಯ್ಕೆಮಾಡಿಕೊಂಡು ಕಾವ್ಯದ ಮೂಲಕ ಸಮಾಜಕ್ಕೆ ಸಂದೇಶ ಮಾರ್ಗದರ್ಶನವನ್ನು ನೀಡುವಂಥ ಕವಿತೆಗಳು ಸೃಷ್ಠಿಯಾಗಬೇಕೆಂದರು.
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿ ತಾಲೂಕಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಭಾಜನರಾದ ಡಾ.ಜಮಿರುಲ್ಲ ಷರೀಫ್, ಡಾ.ಆರ್.ವಿ.ಸರಾಫ್, ಪಿ.ಆರ್.ನಾಯ್ಕ, ಶ್ರೀಧರ ಶೇಟ್, ಮಾನಾಸುತ ಐವರೂ ಒಂದೇ ವೇದಿಕೆಯಲ್ಲಿರುವುದು ಅತ್ಯಂತ ವಿಶೇಷ ಮಾತ್ರವಲ್ಲ, ಇಂದಿನ ಕಾರ್ಯಕ್ರಮದ ಘನತೆಯನ್ನೂ ಹೆಚ್ಚಿಸಿದೆ. ಪರಿಷತ್ತನ್ನು ಕಟ್ಟಿ ಬೆಳೆಸಿದ ಹಿರಿಯರ ಮಾರ್ಗದರ್ಶನದಲ್ಲಿ ನಾವೆಲ್ಲರು ಕನ್ನಡದ ಕೆಲಸ ಮಾಡುತ್ತಿರುವುದೇ ಖುಷಿಕೊಡುವ ಸಂಗತಿ ಎಂದರು.
ಪರಿತಿಷ್ತನಿಂದ ನವೆಂಬರ್ ಮಾಸದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಸಂಘಟಿಸಲಾಗಿದ್ದು ಇಂದು ಮನೆಯಂಗಳದಲ್ಲಿ ಕಾವ್ಯೋತ್ಸವ, ನವೆಂಬರ್ 14ರಂದು ಸರ್ಕಾರಿ ಪ್ರೌಢಶಾಲೆ ಗೊರಟೆಯಲ್ಲಿ ಗೀತಗಾಯನ ಸ್ಪರ್ಧೆ, 22ನೇ ತಾರೀಕಿನಂದು ದಿ ನ್ಯೂ ಇಂಗ್ಲಿಷ್ ಪ.ಪೂ. ಕಾಲೇಜಿನಲ್ಲಿ ಕನ್ನಡ ನಾಡು ನುಡಿ ಪ್ರಬಂಧ ಸ್ಪರ್ಧೆ, 27ನೇ ತಾರೀಕಿನಂದು ಸರ್ಕಾರಿ ಪ್ರೌಢಶಾಲೆ ಬೈಲೂರಿನಲ್ಲಿ ಕನ್ನಡ ನಾಡು ನುಡಿಯ ಕುರಿತು ಭಾಷಣ ಸ್ಪರ್ಧೆಯು ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ನಿವೃತ್ತ ಪ್ರಾಂಶುಪಾಲ ಡಾ.ಆರ್. ನರಸಿಂಹಮೂರ್ತಿ, ಸಾಹಿತಿ ಮಾನಾಸುತ ಶಂಭು ಹೆಗಡೆ, ನಾರಾಯಣ ಯಾಜಿ ಶಿರಾಲಿ, ಮಾತನಾಡಿದರು. ಕಾವ್ಯೋತ್ಸವದಲ್ಲಿ ಪ್ರೊ.ಆರ್.ಎಸ್.ನಾಯಕ, ನೇತ್ರಾವತಿ ಆಚಾರ್ಯ, ಎಂ.ಡಿ.ಪಕ್ಕಿ, ಪೂರ್ಣಿಮಾ ಮುರ್ಡೇಶ್ವರ, ಮಂಜುನಾಥ ನಾಯ್ಕ ಯಲ್ವಡಿಕವೂರ್, ಎಚ್.ಎನ್.ನಾಯ್ಕ, ಉಮೇಶ ಸರ್ಪನಕಟ್ಟೆ, ಇಂದುಮತಿ ಬಿ.ಜೆ., ಸುರೇಶ ಮುರ್ಡೇಶ್ವರ, ಗಣಪತಿ ಕಾಯ್ಕಿಣಿ, ಕೃಷ್ಣ ಮೊಗೇರ ಅಳ್ವೆಕೋಡಿ, ಚಂದ್ರಶೇಖರ ಪಡುವಣಿ ಸ್ವರಚಿತ ಕವಿತೆಯನ್ನು ವಾಚಿಸಿದರು.
ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ, ಕಲಾಸಿರಿ ಪ್ರತಿಷ್ಠಾನದ ಸಂಚಾಲಕ ಶ್ರೀಧರ ಶೇಟ್ ಎಲ್ಲರನ್ನು ಸ್ವಾಗತಿಸಿದರಲ್ಲದೇ ಡಾ.ಆರ್.ವಿ.ಸರಾಫ್, ಡಾ.ಜಮಿರುಲ್ಲ ಷರೀಫ್, ಡಾ.ನರಸಿಂಹ ಮೂರ್ತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಮಾನಾಸುತ ಶಂಭು ಹೆಗಡೆ, ಹಾಗೂ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಇವರನ್ನು ಸನ್ಮಾನಿಸಿದರಲ್ಲದೇ ಕಾವ್ಯೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಕವಿಗಳಿಗೆ ಶಾಲು ಹೊದಿಸಿ ಪುಸ್ತಕ ಕಾಣಿಕೆ ನೀಡಿದರು. ಹೇಮಲತಾ ರಾವ್ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಶಾ ಶೇಟ್ ಸಹಕರಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಕೃಷ್ಣಾನಂದ ಶೇಟ್ ಮತ್ತು ಮಂಗಲಾ ಶೇಟ್, ಶೀತಲಾ ಚಿತ್ರಾಪುರ ಮುಂತಾದವರು ಉಪಸ್ಥಿತರಿದ್ದರು.