ಹೊನ್ನಾವರ: ತಾಲೂಕಿನ ಚಂದಾವರದಲ್ಲಿ ಅಂಚೆ ಇಲಾಖೆ ವತಿಯಿಂದ ‘ಒಂದು ಸೂರು, ಸೇವೆ ನೂರು’ ಎಂಬ ಘೋಷವಾಖ್ಯದೊಂದಿಗೆ ಕಾರವಾರ ಅಂಚೆ ವಿಭಾಗದಲ್ಲೇ ಪ್ರಪ್ರಥಮ ಬಾರಿಗೆ ಐದು ತಲೆಮಾರಿನ ಸದಸ್ಯರನ್ನು ಒಟ್ಟುಗೂಡಿಸಿ ಅಂಚೆ ಖಾತೆ ತೆರೆದು ಪಾಸ್ಬುಕ್ ನೀಡುವ ಮೂಲಕ ‘ಅಂಚೆ ಜನ ಸಂಪರ್ಕ ಅಭಿಯಾನ’ ನಡೆಸಲಾಯಿತು.
ಬೈಲೂರಿನ ಅತೀ ಅಪರೂಪದ 5 ತಲೆಮಾರಿನ ಸದಸ್ಯರಾದ ಗೌರಿ ನಾಯ್ಕ (90), ಮಾದೇವಿ ನಾಯ್ಕ (65), ವಸಂತಿ ನಾಯ್ಕ (49), ವಂದನಾ ನಾಯ್ಕ (29), ವಿಹಾನ ನಾಯ್ಕ (ಒಂದು ವರ್ಷ ಏಳು ತಿಂಗಳು) ಸದಸ್ಯರನ್ನು ಗುರುತಿಸಿ ಅವರಿಗೆ ಅಂಚೆ ಪಾಸ್ಬುಕ್ಗಳನ್ನು ಮಾಡಿಸಿ ಸನ್ಮಾನಿಸಿದರು.
ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಅವರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಅಂಚೆ ನಿರೀಕ್ಷಕ ಗಿರೀಶಕುಮಾರ, ಅಂಚೆ ಮೇಲ್ವಿಚಾರಕ ದಿನೇಶ ನಾಯ್ಕ, ವಿಶಾಲ ನಾಯ್ಕ ಉಪಸ್ಥಿತರಿದ್ದರು.