ಕಾರವಾರ: ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ ನ.18, 19 ಹಾಗೂ ಡಿ.2, 3ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳಲ್ಲ, ತಹಶೀಲ್ದಾರರ, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಸಲಾಗಿದೆ. ಕರಡು ಮತದಾರರ ಪಟ್ಟಿಗಳಲ್ಲಿ ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ಅರ್ಹತಾ ದಿನಾಂಕ 01-01-2024 ಸಂಬಂಧಿಸಿದಂತೆ ಯುವಕರು/ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ, ಮತ್ತು ಹೆಸರು ಕಡಿಮೆಗೊಳಸಲು ನಮೂನೆ-7ರಲ್ಲಿ ಮತ್ತು ಹೆಸರು ಇತ್ಯಾದಿ ತಿದ್ದುಪಡಿ ಬಯಸಿದಲ್ಲಿ ನಮೂನೆ ಆ ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಯವರಿಗೆ (ಬಿಎಲ್ಓ), ಸಹಾಯಕ ಮತದಾರರ ನೋಂದಣಾಧಿಕಾರಿ (ತಹಶೀಲ್ದಾರ) ಕಛೇರಿಗೆ ಚುನಾವಣಾ ವೇಳಾಪಟ್ಟಿಯಂತೆ ಡಿ.9ರ ಒಳಗೆ ತಮ್ಮ ಹಕ್ಕು ಮತ್ತು ಆಕ್ಷೇಪಣಿಗಳನ್ನು ನೀಡಲು ಕಾಲಾವಕಾಶ ನೀಡಲಾಗಿದೆ ಎಂದರು.
ಅಂತಿಮ ಮತದಾರರ ಪಟ್ಟಿ ಅಧಿಸೂಚನೆ 2024ರ ಜ.5ರಂದು ಹೊರಡಿಸಲಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ಬಿಎಲ್ಎ ನೇಮಕಾತಿ ಮಾಡಿ, ಬಿ.ಎಲ್.ಎ. ನೇಮಕಾತಿ ಮಾಡಿದ ಬಗ್ಗೆ ಅವರ ಹೆಸರು, ಮತಗಟ್ಟೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಪಟ್ಟಿಯನ್ನು ಮಾಡಿ ತಹಶೀಲ್ದಾರ ರವರಿಗೆ ನೀಡಲು ಕೋರಿದೆ. ಯುವ ಮತದಾರರ ನೋಂದಣಿ 18-19 ವರ್ಷ. ಸಾರ್ವಜನಿಕರಿಗೆ ವೋಟರ್ಸ್ ಹೆಲ್ಪ್ಲೈನ್ ಆ್ಯಪ್ ಮೊಬೈಲ್ ಆ್ಯಪ್ ಮುಖಾಂತರ ತಮ್ಮ ಹೆಸರುಗಳನ್ನು ನೊಂದಾಯಿಸಲು, ತಿದ್ದುಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಸಲಾಗಿದೆ. ಮತಗಟ್ಟೆ ಅಧಿಕಾರಿಯ ಸಹಾಯದಿಂದ ಬಿಎಲ್ಒ ಆ್ಯಪ್ ಮುಖಾಂತರ ಹೆಸರು ಮತ್ತು ವಿಳಾಸ ತಿದ್ದುಪಡಿಯಿದ್ದರೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಜಿಲ್ಲೆಯಲ್ಲಿ 2,784 ಪುರುಷ ಮತ್ತು 2025 ಮಹಿಳಾ ವಿಐಪಿ ಮತದಾರರಿದ್ದು, 33,496 ಯುವ, 15,591 ವಿಶೇಷಚೇತನ ಮತದಾರರಿದ್ದಾರೆ. ಒಟ್ಟು 1435 ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.