ಕಾರವಾರ: ಅಂಕೋಲಾದ ಅಲಗೇರಿ ವಿಮಾನ ನಿಲ್ದಾಣಕ್ಕೆ ನಿರಾಶ್ರಿತರಾಗಲಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದೇ ಹಿಂದಿನ ಸರ್ಕಾರ ಅನ್ಯಾಯ ಎಸಗಿದ್ದು, ಈಗಿನ ಸರ್ಕಾರ ಹಾಗೂ ಶಾಸಕ ಸತೀಶ್ ಸೈಲ್ ಮೇಲಿನ ಭರವಸೆಯಿಂದಾಗಿ ನಿಲ್ದಾಣಕ್ಕೆ ಭೂಮಿ ನೀಡಲು ಸಿದ್ಧರಾಗಿದ್ದೇವೆ ಎಂದು ಅಲಗೇರಿ ವಿಮಾನ ನಿಲ್ದಾಣ ನಿರಾಶ್ರಿತರ ಹೋರಾಟಗಾರರ ವೇದಿಕೆ ಅಧ್ಯಕ್ಷ ಸುರೇಶ ನಾಯಕ ಅಲಗೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಿರಾಶ್ರಿತರ ತಂಡ ಶಾಸಕ ಸತೀಶ್ ಸೈಲ್ ಮುಖಂಡತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಜಿಲ್ಲಾಡಳಿತದಿಂದ ಆದ ಅನ್ಯಾಯ ಬಗೆಹರಿಸಲು ಸುಮಾರು ಎಂಟು ವಿಷಯಗಳ ಬೇಡಿಕೆ ಇಟ್ಟಿದ್ದೆವು. ಅವೆಲ್ಲವನ್ನೂ ಚರ್ಚಿಸಿ ಕಾನೂನಿನ ವ್ಯವಸ್ಥೆಯಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳಬೇಕೆಂದು ಮತ್ತು ಈ ಕುರಿತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಮಾನ ನಿಲ್ದಾಣ ನಿರಾಶ್ರಿತರೊಂದಿಗೆ ಶೀಘ್ರವೇ ಮತ್ತೊಂದು ಸಭೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಲು ಸೂಚಿಸಿದ್ದಾರೆ. ಮುಂದಿನ ವಾರ ಮತ್ತೊಂದು ಸಭೆ ನಡೆಯುವ ಸಾಧ್ಯತೆ ಇದ್ದು, ನಿರಾಶ್ರಿತರ ಬೇಡಿಕೆಗಳಿಗೆ ಮನ್ನಣೆ ಸಿಗುವ ಭರವಸೆ ಇದೆ ಎಂದರು.
ಈ ವಿಮಾನ ನಿಲ್ದಾಣಕ್ಕೆ 2020ರಲ್ಲೇ ಪ್ಯಾಕೇಜ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. 2021ರಿಂದ ಹೋರಾಟ ಮಾಡುತ್ತಾ ಬಂದಿದ್ದು, ಈ ಹಿಂದಿನ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ನಾಲ್ಕೈದು ಸಭೆಗಳನ್ನೂ ನಡೆಸಿದ್ದೆವು. 2013ರ ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಪ್ರಥಮ ಬಾರಿಗೆ ಜಾಗ ಕಳೆದುಕೊಂಡವರಿಗೆ ಮೂರು ಪಟ್ಟು ಹಾಗೂ ಎರಡನೇ ಬಾರಿ ಕಳೆದುಕೊಳ್ಳುವವರಿಗೆ ಆರು ಪಟ್ಟು ಜಾಗ ನೀಡಬೇಕೆಂದು ನಿಯಮವಿದೆ. ಆದರೆ ನಮಗೆ ಜಿಲ್ಲಾಡಳಿತದಿಂದ ಅನ್ಯಾಯವಾಗಿದೆ. ಅಲಗೇರಿಯಲ್ಲಿ ನಿರಾಶ್ರಿತರಾಗುವವರಿಗೆ ಬೊಗ್ರಿಬೈಲ್ ಸಮೀಪದ ಸ್ಥಳವಾಗಿದ್ದರಿಂದ ಒಂದುವೇಳೆ ಭೂಸ್ವಾಧೀನವಾದಲ್ಲಿ ಅಲ್ಲಿಯೇ ಇರುವ ಐದು ಎಕರೆ 20 ಗುಂಟೆಯಲ್ಲಿ ನಮಗೆ ಬದಲಿ ಜಾಗ ನೀಡಲು 2020ರಲ್ಲೇ ಕೇಳಿದ್ದೆವು. ಆದರೆ 2022 ಹಾಗೂ 23ರಲ್ಲಿ ಅದೇ ಜಾಗದಲ್ಲಿ ಎರಡು ಸಮುದಾಯಗಳಿಗೆ ಸ್ಮಶಾನ ಭೂಮಿಗಾಗಿ ಜಾಗ ಮಂಜೂರಿಸಲಾಗಿದೆ. ಇದು ಪ್ರಕ್ರಿಯೆ ನಡೆಯುವಾಗಲೇ ಅಂದಿನ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದಾದ ಅನ್ಯಾಯವಾಗಿದೆ ಎಂದು ದೂರಿದರು.
ಭೂಸ್ವಾಧೀನಕ್ಕೊಳಪಡುವ ಬೇಲೇಕೇರಿಯ ದೇವರಾಯ ನಾಯಕ ಮಾತನಾಡಿ, ಎರಡನೇ ಬಾರಿ ಮನೆ ಮಠ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆ. 2020ರಲ್ಲಿ ವಿಮಾನ ನಿಲ್ದಾಣಕ್ಕೆ ಅಧಿಸೂಚನೆ ಹೊರಡಿಸಿದಾಗ ನಾವೆಲ್ಲ ಕಂಗಾಲಾದೆವು. ಸೀಬರ್ಡ್ಗೆ ಈಗಾಗಲೇ ಜಾಗ ಹೋಗಿದ್ದು, ಮತ್ತೆ ಗಾಯದ ಮೇಲೆ ಬರೆಯಂತೆ ವಿಮಾನ ನಿಲ್ದಾಣ ಯೋಜನೆ ಬರುತ್ತದೆಂದಾಗ ನಾವು ವಿರೋಧ ವ್ಯಕ್ತಪಡಿಸಿದೆವು. ಬಸ್ ಹತ್ತಲು ಜನ ಇಲ್ಲದಾಗ ವಿಮಾನ ಹತ್ತುವರು ಯಾರೆಂದು ಯೋಚಿಸುತ್ತಿದ್ದೆವು. ಸುಮಾರು 18 ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದಿದೆ. ಆದರೆ ಅಷ್ಟರಲ್ಲೇ ಎಲ್ಲಾ ಅವಾರ್ಡ್ ನೋಟಿಸ್ ತಯಾರಾಗಿತ್ತು. ನಿರಾಶ್ರಿತರಿಗೆ ಯೋಗ್ಯ ಪರಿಹಾರ ದೊರಕಿಸಿಕೊಡುವಲ್ಲಿ ಆಡಳಿತ ಎಡವಿತ್ತು. ಸೀಬರ್ಡ್ ಯೋಜನೆಯಲ್ಲಿ ಭೂ ನಿರಾಶ್ರಿತರಿಗೆ ಪರಿಹಾರ ನೀಡಿದ ಅನುಭವ ಶಾಸಕ ಸತೀಶ್ ಸೈಲ್ ಅವರಿಗಿದ್ದ ಕಾರಣ ಇದೀಗ ವಿಮಾನ ನಿಲ್ದಾಣದ ಯೋಜನೆಯಲ್ಲೂ ನಮಗೆ ಯೋಗ್ಯ ಪರಿಹಾರ ಸಿಗುವ ಭರವಸೆ ಇದೆ ಎಂದರು.
ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ, ರೂಪಾಲಿ ನಾಯ್ಕರು ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ವಿರುದ್ಧ ಆಪಾದನೆ ಮಾಡಿ, ಅಲಗೇರಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಜೊತೆಗಿನ ಸಿಎಂ ಸಭೆ ಸ್ವಾಗತ ಮಾಡುವುದಾಗಿ ಹೇಳಿದ್ದಾರೆ. ಅದನ್ನ ನಾನೂ ಒಪ್ಪುತ್ತೇನೆ. ಆದರೆ ಅವರ ಕಾಲದಲ್ಲಿ ಕಾನೂನು ಕಟ್ಟಳೆ ಯಾಕೆ ಗಮನಕ್ಕೆ ಬಂದಿಲ್ಲ? ಭೂನಿರಾಶ್ರಿತರಾಗುವವರನ್ನು ಗಮನಕ್ಕೆ ತೆಗೆದುಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ಕಾನೂನುಪ್ರಕಾರ ಕೆಲಸ ಮಾಡಲು ನಿರ್ದೇಶನ ನೀಡುವಲ್ಲಿ ರೂಪಾಲಿ ಅಂದು ಎಡವಿದ್ದರು. ಎಸ್.ಸಿಯವರ ಜಾಗವನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಮಾಡಬಾರದು ಎಂದಿದೆ. ಮಾಡುವ ಅವಕಾಶ ಬಂದರೆ ಅವರಿಗೆ ಸೂಕ್ತ ಪರಿಹಾರ ಹಾಗೂ ನೆಲೆ ಕಲ್ಪಿಸಬೇಕೆಂದಿದೆ. ಆದರೆ ಮಾಜಿ ಶಾಸಕಿಗೆ ಇದು ಗಮನಕ್ಕೆ ಬಂದಿಲ್ಲವೇ? ಶಾಸಕ ಸತೀಶ್ ಸೈಲ್ ಅವರು ಕಾನೂನು ಪರಿಣಿತರ ಅಭಿಪ್ರಾಯ ಪಡೆದು ಅಲಗೇರಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಸಿಎಂ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.
ಭಾವಿಕೇರಿ ಗ್ರಾ.ಪಂ ಉಪಾಧ್ಯಕ್ಷೆ ಶೋಭಾ ಆಗೇರ, ಸದಸ್ಯೆ ಕಮಲಿ ಆಗೇರ ಮುಂತಾದವರಿದ್ದರು