ಶಿರಸಿ: ಈಗಾಗಲೇ ಮೂಡಿರುವ ಬರದ ಛಾಯೆ ಹಾಗೂ ಎಲೆಚುಕ್ಕಿ ರೋಗದ ಆತಂಕದಲ್ಲಿರುವ ತಾಲೂಕಿನ ಗ್ರಾಮೀಣ ಭಾಗದ ಜನ ಮನೆಯಾಚೆ ಬರುವುದಕ್ಕೇ ಯೋಚಿಸುವ ಸ್ಥಿತಿ ಬಂದೊಗಿದೆ. ಇದರಿಂದ ನಗರ ಭಾಗದಲ್ಲಿ ಇವರನ್ನು ನಂಬಿರುವ ವ್ಯಾಪಾರಿಗಳೂ ನಷ್ಟದ ದಿನವೇ ಹೆಚ್ಚಾಗಿ ಗೋಚರಿಸುತ್ತಿದೆ. ಈ ಬೆಳವಣಿಗೆಗಳ ನಡುವೆ ಮತ್ತೊಂದು ಸಮಸ್ಯೆ ತಾಲ್ಲೂಕಿನ ಜನರನ್ನು ಕಾಡಲು ಆರಂಭಿಸಿದೆ.
ವರ್ಷದ ಹಿಂದೆ ಎದುರಾದ ದರೋಡೆ ಮಾದರಿಯ ಆತಂಕಕ್ಕೆ ಆರಕ್ಷಕರ ಕಾಳಜಿ ಹಾಗೂ ಜನಪ್ರತಿನಿಧಿಗಳ ಎಚ್ಚರಿಕೆ ಕೊಂಚ ಪರಿಣಾಮಕಾರಿ ಪರಿಹಾರ ನೀಡಿತ್ತು. ಆದರೆ ರಸ್ತೆ ಬದಿ ನಿಂತ ಅಪರಿಚಿತ ದ್ವಿಚಕ್ರ ವಾಹನ ಸವಾರರ ಹಗಲು ದರೋಡೆ ಸಮಸ್ಯೆ ಇದೀಗ ಮತ್ತೆ ಆರಂಭವಾಗಿದೆ.
ಶಿರಸಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಕುಮಟಾ, ಸಿದ್ದಾಪುರ, ಹುಬ್ಬಳ್ಳಿ, ಯಲ್ಲಾಪುರ, ಬನವಾಸಿ ಹಾಗೂ ಹುಲೇಕಲ್ ಮುಖ್ಯರಸ್ತೆಯಿಂದ ವಿವಿಧ ಗ್ರಾಮಗಳಿಗೆ ತೆರಳುವ ಡಾಂಬರು ರಸ್ತೆಯಲ್ಲಿ ಪ್ರಯಾಣಿಸುವವರೇ ಈ ಹಗಲು ದರೋಡೇಕೋರರ ಸಂಚಿಗೆ ಸಿಲುಕುತ್ತಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಸಂಬಂಧಿಗಳ ಮನೆಗೆ ತೆರಳಿ ಹಿಂದಿರುಗುತ್ತಿದ್ದ ಮಹಿಳೆಯರು ಇವರ ನೇರ ಟಾರ್ಗೆಟ್ ಆಗಿದ್ದು, ರಸ್ತೆ ಬದಿಯಲ್ಲಿ ಮಾತನಾಡುತ್ತಾ ನಿಂತರವರಂತೆ ಗೋಚರಿಸುವ ಯುವಕರು, ಮಹಿಳೆಯರು ಇಲ್ಲವೇ ಅವರನ್ನು ಕರೆತರುತ್ತಿರುವವ ವಾಹನಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ರಸ್ತೆ ಬದಿ ನಿಂತಿರುವ ಇಬ್ಬರಲ್ಲಿ ವಾಹನ ಬರುವ ದಿಕ್ಕಿಗೆ ಮುಖ ಮಾಡಿ ಒಬ್ಬ ತಮ್ಮ ಬೈಕಲ್ಲಿ ಕೂತಿದ್ದರೆ, ಅವನ ಜತೆ ಮಾತನಾಡುತ್ತಿರುವಂತೆ ನಿಲ್ಲುವ ವ್ಯಕ್ತಿ ಬೆಲ್ಟ್ ಇಲ್ಲವೇ ಬೇರೆ ಬಲವಾದ ವಸ್ತುವಿನಿಂದ ದಾಳಿ ನಡೆಸುತ್ತಾನೆ.
ಹೊಡೆತದ ರಭಸಕ್ಕೆ ವಾಹನ ಸವಾರರು ಬಿದ್ದರೆ ಕೂಡಲೇ ಹಿಂಬದಿ ಕುಳಿತಿದ್ದ ಮಹಿಳೆಯ ಸರ, ಪರ್ಸ್ ಕಿತ್ತು ಪರಾರಿಯಾಗುತ್ತಾರೆ. ಸವಾರರು ಬೀಳದೇ ಕೊಂಚ ಮುಂದೆ ತೆರಳಿ ನಿಂತು ಬೇರೆ ವಾಹನ ಸವಾರರು ಬಂದಾಗ ಮಾಹಿತಿ ನೀಡಿ ಬೆನ್ನತ್ತುವ ಪ್ರಯತ್ನ ಮಾಡಿದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಕಳೆದ ಒಂದೆರಡು ವಾರದಿಂದ ಪಟ್ಟಣದ ವಿವಿಧ ಒಳ ಮಾರ್ಗಗಳಲ್ಲಿ ಈ ಚಟುವಟಿಕೆ ಹೆಚ್ಚಾಗಿದ್ದು, ಇತ್ತೀಚೆಗೆ ಶಿರಸಿ-ಸಿದ್ದಾಪುರ ರಸ್ತೆಯ ಗಿಡಮಾವಿನಕಟ್ಟಾ ಕ್ರಾಸ್ನಿಂದ ಬರೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕಾಗೇರಿ ಕತ್ರಿ ಹಾಗೂ ಬೆಟ್ಟಕೊಪ್ಪ ಕತ್ರಿ ಮಧ್ಯೆ ನಿಂತ ಇಬ್ಬರು ಯುವಕರು ಮಾರ್ಗದಲ್ಲಿ ತೆರಳುವ ಕೆಲ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯರು ಇರುವ ವಾಹನವನ್ನೇ ಗುರಿಯಾಗಿಸಿ ಈ ದಾಳಿ ನಡೆದಿರುವುದು ಗಮನಾರ್ಹ ಅಂಶ. ನಿಮಿಷಕ್ಕೆ ಕನಿಷ್ಠ ನಾಲ್ಕಾರು ವಾಹನ ಸಂಚರಿಸುವ ಇಂತಹ ಮಾರ್ಗದಲ್ಲೇ ಮಧ್ಯಾಹ್ನ 3.30ರ ಸಮಯಕ್ಕೆ ಮುಖಕ್ಕೆ ಬಟ್ಟೆಯನ್ನೂ ಕಟ್ಟಿಕೊಳ್ಳದೇ, ನಂಬರ್ ಪ್ಲೇಟ್ ಇರುವ ಆಕ್ಟಿವಾ ಗಾಡಿ ಜತೆ ಆಗಮಿಸಿದ್ದ ಇಬ್ಬರು ಕಳ್ಳರು ದಾರಿಯಲ್ಲಿ ಬರುವವರಿಗೆ ಸಮೀಪ ಬರುವವರೆಗೂ ಸೂಚನೆ ಸಿಗದಂತೆ ಇದ್ದು, ಏಕಾಏಕಿ ಬೆಲ್ಟ್ ಮೂಲಕ ದಾಳಿ ನಡೆಸಿ ಸುಲಿಗೆ ಮಾಡುವ ಯತ್ನ ಮಾಡಿದ್ದಾರೆ. ಸರಿಸುಮಾರು ಮಧ್ಯಾಹ್ನ 2.30 ರಿಂದಲೇ ಇಬ್ಬರು ಈ ಸ್ಥಳದಲ್ಲಿ ನಿಂತದ್ದನ್ನು ಕೆಲವರು ಗಮನಿಸಿದ್ದಾರೆ. ಆದರೆ ಯಾರೋ ಇರಬೇಕು ಅಂತ ಪ್ರಶ್ನಿಸಿಲ್ಲ.
ಸಾಮಾನ್ಯವಾಗಿ ರಸ್ತೆ ಪಕ್ಕ ನಿಂತು ಮಾತನಾಡುವವರು ಕಾಣುವುದು ಸಾಮಾನ್ಯ. ಆದರೆ ದಿಢೀರ್ ದಾಳಿ ಮಾಡುವ ಇಂತವರನ್ನು ಪತ್ತೆ ಮಾಡುವುದಾದ್ರೂ ಹೇಗೆ? ದ್ವಿಚಕ್ರ ವಾಹನ ಸವಾರರನ್ನು ಹೊಡೆದು ಕೆಡವಿ ದೋಚುವ ಉದ್ದೇಶಹೊಂದಿರುವ ಇಂತಹ ಕ್ರೂರಿಗಳಿಗೆ ತಕ್ಕ ಪಾಠ ಕಲಿಸುವ ಕಾರ್ಯ ಆಗಬೇಕಿದೆ.
ಜವಾಬ್ದಾರಿ ಯಾರದ್ದು?
ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಇಲ್ಲಿ ಬಹು ದೊಡ್ಡದಿದೆ. ಹೊಸದಾಗಿ ಆಯ್ಕೆಯಾಗಿರುವ ಶಾಸಕ ಭೀಮಣ್ಣ ನಾಯ್ಕ್ ಜನಪರ ಕೆಲಸಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಹೇಳಿದ್ದು, ಇಂತಹ ಘಟನೆಯನ್ನು ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ, ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಬೇಕಿದೆ. ಇದರ ಜತೆ ಪೊಲೀಸರೇ ವಿಶೇಷ ಕಾಳಜಿ ವಹಿಸಿ ಹಿಂದಿನ ವರ್ಷದಂತೆ ರಸ್ತೆ ಬದಿ ಕಳ್ಳರನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಮುಂದೆ ಈಗ ಆರಂಭವಾಗಿರುವ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗದ ಸ್ಥಿತಿ ತಲುಪಲಿದೆ.
ಕಾಗೇರಿ ಮತ್ತು ಬೆಟ್ಟಕೊಪ್ಪ ಕ್ರಾಸ್ ಸಮೀಪ ತಾಯಿಯೊಂದಿಗೆ ಬರುತ್ತಿದ್ದ ತಮ್ಮ ಮೇಲೆ ನಡೆದ ದಾಳಿ ಹಾಗೂ ಕೂದಲೆಳೆ ಅಂತರದಿಂದ ಬಚಾವಾಗಿರುವ ಬಗ್ಗೆ ವಿವರಿಸಿರುವ ಮಹೇಶ್ ಹೆಗಡೆ, ಅನಿರೀಕ್ಷಿತವಾಗಿ ಹಾಗೂ ಏಕಾಏಕಿ ನಡೆದ ದಾಳಿ ನನ್ನನ್ನು ಏನು ಮಾಡಬೇಕೆಂದು ತಿಳಿಯದಂತೆ ಮಾಡಿತು. ಜತೆಯಲ್ಲಿ ವಯಸ್ಸಾದ ತಾಯಿ ಸಹ ಇರುವುದರಿಂದ ವಾಪಸ್ ಅವರನ್ನು ಅಟ್ಟಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಯಾರನ್ನೋ ಸಹಾಯಕ್ಕಾಗಿ ಕರೆ ಮಾಡಿ ಕರೆಸುವಷ್ಟು ಸಮಯ ಇರಲಿಲ್ಲ. ದಾಳಿ ಯತ್ನ ನಡೆದ ಕೆಲ ನಿಮಿಷದಲ್ಲೇ ಅದೇ ಮಾರ್ಗವಾಗಿ ಕಾರಲ್ಲಿ ಬಂದವರ ಸಹಕಾರದೊಂದಿಗೆ ಸಾವರಿಸಿಕೊಂಡು, ಗಿಡಮಾವಿನಕಟ್ಟಾ ಮುಖ್ಯ ರಸ್ತೆವರೆಗೆ ತಲುಪಿದ್ದಾಯಿತು. ದೂರು ಕೊಡಬೇಕೋ ಬೇಡವೋ ತಿಳಿಯಲಿಲ್ಲ. ಕಳೆ ವರ್ಷ ಸಹ ಇಂತದ್ದೇ ಘಟನೆಗಳು ನಡೆದಾಗ ಪೊಲೀಸರು ಮಟ್ಟ ಹಾಕಿದ್ದರು ಅಂತ ಕೇಳಿದ್ದೇನೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರು, ಸ್ಪೀಕರ್ ಸಹ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿವಾಸದಿಂದ ಕೂಗಳತೆಯಷ್ಟು ದೂರದಲ್ಲಿ ಇಂತಹ ಘಟನೆ ನಡೆಯುತ್ತಿದೆ. ಪೊಲೀಸರು ಗಸ್ತು ಹೆಚ್ಚಿಸುವ ಜತೆ ಸ್ಥಳೀಯರು ಸಹ ತಮ್ಮ ಜವಾಬ್ದಾರಿ ಮೆರೆದು, ಅಪರಿಚಿತರನ್ನು ಪ್ರಶ್ನಿಸುವ ಹಾಗೂ ದಿನಕ್ಕೆ ಒಂದೆರಡು ಗಸ್ತು ಹೊಡೆಯುವ ಕಾರ್ಯ ಮಾಡಬೇಕು. ಆಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಬೀಳಲು ಸಾಧ್ಯ ಎಂದಿದ್ದಾರೆ.