ಸಿದ್ದಾಪುರ: ಕಾಂಗ್ರೆಸ್ ಯಾವಾಗಲೂ ಜನಪರವಾಗಿ ಕೆಲಸ ಮಾಡಿಲ್ಲ. ಜನರನ್ನು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆ, ಜಾತಿ ಆಧಾರದ ಮೇಲೆ ಒಡೆದು ಗೆದ್ದಿದ್ದಾರೆ. ಭ್ರಷ್ಟಾಚಾರದ ಜನಕ ಯಾರು ಎಂದರೆ ಕಾಂಗ್ರೆಸ್ ಅಂತ ಹೇಳಬೇಕಾಗಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಹಣ ಗಳಿಕೆಯಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಆಯೋಜಿಸಿದ ಪ್ರತಿಭಟನಾ ಮೆರವಣಿಗೆಯ ಕೊನೆಯಲ್ಲಿ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಲೋಕಸಭೆ ಗೆಲ್ಲದೆ ಹೋದರೆ ಸೋನಿಯಾ ಹಾಗೂ ರಾಹುಲ್ ಗಾಂಧಿ ಬೇಜಾರು ಮಾಡಿಕೊಳ್ಳುತ್ತಾರೆ ಎಂದು ತಿಳಿದಿದ್ದಾರೆ.
ವಿಧಾನಸಭಾ ಚುನಾವಣೆಯನ್ನು ಯಾವ ರೀತಿ ಹಣ ಹಂಚುವ ಮೂಲಕ ಗೆದ್ದುಕೊಂಡರು ಅದೇ ರೀತಿ ಲೋಕಸಭಾ ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ರೀತಿಯಾಗಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಅಭಿವೃದ್ಧಿಗೆ ಯಾವುದೇ ಹಣ ಬಂದಿಲ್ಲ ಕಾಂಗ್ರೆಸ್ ಪಕ್ಷದ ಶಾಸಕರು ನಮ್ಮ ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ಆದ ಕಾಮಗಾರಿಗಳನ್ನು ಉದ್ಘಾಟಿಸುತ್ತಾ ತಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ನಾವು ತಂದ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಿದ್ದೇವೆ ಎಂದು ಮುಖವಾಡ ಹಾಕಿಕೊಂಡು ಓಡಾಡುತ್ತಿದ್ದಾರೆ. ನಮ್ಮ ಪಕ್ಷದ ಆಡಳಿತ ಅವಧಿಯಲ್ಲಿ ಆದ ಕಾಮಗಾರಿಗಳನ್ನು ಉತ್ತಮ ಆಡಳಿತ ಅವಧಿಯಲ್ಲಿ ಆಗಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕೇವಲ ಮತಕ್ಕಾಗಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಮಿತ್ರ ಪಕ್ಷಗಳು ಉಗ್ರರ ಪರವಾಗಿ ನಿಂತಿದೆ. ಕೇವಲ ಒಂದು ಸಮುದಾಯದ ಪರವಾಗಿ ನಿಂತಿದೆ. ಕಾಂಗ್ರೆಸ ಪಕ್ಷವನ್ನು ಉಚ್ಛಾಟಿ ಸದೇ ಹೋದರೆ ದೇಶ ಅದೋಗತಿಗೆ ತಲುಪಲಿದೆ. ಎಲೆಚುಕ್ಕಿ ರೋಗಕ್ಕೆ ಹಣ ನೀಡಿ ರೈತರ ಪರವಾಗಿ ನಿಲ್ಲಬೇಕಾದ ಕಾಂಗ್ರೆಸ್ ಪಕ್ಷ ಈವರೆಗೆ ಕೇವಲ ಮೂರು ನಾಲ್ಕು ಲಕ್ಷ ರೂಪಾಯಿ ನೀಡಿದೆ. ಅರಣ್ಯ ಅತಿಕ್ರಮಣ ದಾರದ ಬಗ್ಗೆ ಮಾತನಾಡಿದ ಅರಣ್ಯ ಮಂತ್ರಿ ಅರಣ್ಯ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಸ್ಥಳೀಯ ಪರಿಸ್ಥಿತಿಯ ಅನುಭವ ಜ್ಞಾನವಿಲ್ಲ.ವರ್ಗಾವಣೆ ಅಕ್ರಮ ದಂದೆಯಲ್ಲಿ ಈ ಸರ್ಕಾರ ತೊಡಗಿಕೊಂಡಿದೆ ಎಂದರು.
ಬಿಜೆಪಿ ಪ್ರಮುಖರಾದ ಮಾರುತಿ ನಾಯ್ಕ ಕಾನಗೋಡ, ರವಿ ಹೆಗಡೆ ಹೂವಿನಮನೆ,ತಿಮ್ಮಪ್ಪ ಮಡಿವಾಳ ಮಾತನಾಡಿದರು. ಮಂಡಲ ಅಧ್ಯಕ್ಷ ಮಾರುತಿ ಟಿ.ನಾಯ್ಕ ಸ್ವಾಗತಿಸಿದರು. ಪಪಂ ಸದಸ್ಯ ನಂದನ ಬರ್ಕರ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಗುರುರಾಜ ಶಾನಭಾಗ ನಿರೂಪಿಸಿದರು. ಶಿರಸಿ ಮಂಡಲ ಅಧ್ಯಕ್ಷ ನಂದನ ಸಾಗರ, ಜ್ಯೋತಿ ಹೆಗಡೆ, ಸುರೇಶ ಬಾಲಿಕೊಪ್ಪ ಸೇರಿದಂತೆ ಹಲವಾರು ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.