ಭಟ್ಕಳ: ತಾಲೂಕಿನ ಜಾಲಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಂದಿನ ಪ್ರಧಾನ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ಉಪವಿಭಾಗಾಧಿಕಾರಿ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ರವಾನಿಸಿದ್ದಾರೆ.
ಮಂಜುನಾಥ ಬೈದಿನಮನೆ ಎನ್ನುವವರಿಗೆ ಸೂಸಗಡಿ ಹೋಬಳ್ಳಿ ವ್ಯಾಪ್ತಿಯ ಸರ್ವೇ ನಂ.323 ಹಿಸ್ಸಾ 4ಕ ಕ್ಷೇತ್ರದ 23 ಗುಂಟೆ ಸ್ಥಿರಾಸ್ತಿಯನ್ನು ಸಂಘಕ್ಕೆ ಒತ್ತೆ ಇಟ್ಟು 2015ರ ಜುಲೈ 3ರಂದು ಸಂಘದ ಮುಖ್ಯ ಶಾಖೆ ಜಾಲಿಯಿಂದ ರೂ.10 ಲಕ್ಷ ಸಾಲ ಪಡೆದಿದ್ದರು. ಹೀಗಿರುವಾಗ ಅಂದಿನ ಪ್ರಧಾನ ವ್ಯವಸ್ಥಾಪಕ ಶಾಂತಾರಾಮ ನಾಯ್ಕ ಸಾಲ ಬಾಕಿ ಇರುವಾಗಲೇ 2017ರ ಮೇ 23ರಂದು ಸಾಲ ಚುಕ್ತಾ ದೃಢೀಕರಣ ನೀಡಿದ್ದಾರೆ. ಅವರಿಂದ ಸಂಸ್ಥೆಗೆ ತುಂಬಾ ನಷ್ಟ ಉಂಟಾಗಿದ್ದು, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವೇದಿಕೆ ಒತ್ತಾಯಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಸಂಘಟನೆಯ ಸಹ ಸಂಘಟನಾ ಕಾರ್ಯದರ್ಶಿ ವಸಂತ ದೇವಾಡಿಗ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರು ಮತ್ತು ಸಂಬ0ಧಪಟ್ಟವರಿಗೆ ದೂರು ನೀಡಿದ್ದರು. ಅದರಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು 2023ರ ಫೆ.20ರಂದು ಸಹಕಾರ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದು ವಿಚಾರಣೆ ನಡೆಸಿ ಸೂಕ್ತ ವರದಿಯನ್ನು ಪೂರೈಸುವಂತೆ ತಿಳಿಸಿದ್ದರು. 2023ರ ಮೇ 15ರಂದು ವಿಚಾರಣೆ ನಡೆಸಿ, ಅಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಂಘದ ಹಿತಾಸಕ್ತಿಯನ್ನು ಕಡೆಗಣಿಸಿ ಮಂಜನಾಥ ಬೈದಿನಮನೆ ಅವರ ಸಾಲ ಚುಕ್ತಾ ದೃಢೀಕರಣ ನೀಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಭಿವೃದ್ಧಿ ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಅಂದಿನ ಮುಖ್ಯ ಕಾರ್ಯನಿರ್ವಾಹಕರು ಉಪ ನೋಂದಣಾಧಿಕಾರಿಗೆ ಪತ್ರ ಬರೆದು ಮಾರ್ಗೆಜ್/ ಚಾರ್ಜ್ ಬಿಡುಗಡೆಗೊಳಿಸುವ ಕುರಿತು ದಸ್ತಾವೇಜನ್ನು ಬರೆದುಕೊಟ್ಟಿರುವುದು ಕೂಡ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಸಂಸ್ಥೆಯನ್ನು ರಕ್ಷಣೆ ಮಾಡಬೇಕಾದವರು ಸಾಲ ಇರುವಾಗಲೇ ಚುಕ್ತಾ ದೃಢೀಕರಣ ನೀಡಿರುವುದು ಮತ್ತು ಭದ್ರತೆಗಾಗಿ ನೀಡಿದ ಆಸ್ತಿ ಮೇಲಿನ ಬೋಜಾ ತೆಗೆದಿರುವುದರಿಂದ ಸಂಸ್ಥೆಗೆ ತುಂಬಾ ನಷ್ಟ ಉಂಟುಮಾಡಿದೆ. ತಕ್ಷಣ ಇವರ ವಿರುದ್ಧ ಸಂಬ0ಧಪಟ್ಟ ಇಲಾಖೆಯವರು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪ್ರಕರಣ ದಾಖಲಿಸದೇ ಹೋದಲ್ಲಿ ಸಂಬ0ಧಪಟ್ಟವರ ಕಛೇರಿ ಮುಂದೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ಶಂಕರ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಸಹ ಕಾರ್ಯದರ್ಶಿ ವಸಂತ ದೇವಾಡಿಗ ಇದ್ದರು.