ದಾಂಡೇಲಿ: ಲೋಕಾಯುಕ್ತ ಅಧಿಕಾರಿಗಳು ಗುರುವಾರ ನಗರಸಭೆಯ ಸಭಾಭವನದಲ್ಲಿ ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ ಅವರು ಆಡಳಿತ ಯಂತ್ರದಲ್ಲಿರುವ ಭೃಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಅಶಿಸ್ತಿನಂತಹ ಪ್ರಕರಣಗಳೂ ಸೇರಿದಂತಹ ಆಡಳಿತಾತ್ಮಕ ಕ್ರಮಗಳ ವಿರುದ್ಧದ ದೂರುಗಳನ್ನು ಪರಿಶೀಲನೆ ಮಾಡಿ ಸಾರ್ವಜನಿಕ ಆಡಳಿತದ ಮಾನದಂಡಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸರಕಾರದ ಪ್ರತಿ ಇಲಾಖೆಯಲ್ಲಿಯೂ ಪ್ರತಿ ಸಿಬ್ಬಂದಿಯೂ ಪ್ರತಿದಿನ ಕಚೇರಿಗೆ ಹಾಜರಾದ ದಿನ ಮತ್ತು ಕಚೇರಿಯಿಂದ ವಾಪಾಸ್ಸು ಹೋಗುವಾಗ ತನ್ನ ಬಳಿ ಇದ್ದ ಹಣದ ಮೊತ್ತವನ್ನು ನಗದು ಪುಸ್ತಕದಲ್ಲಿ ನಮೂದಿಸಬೇಕು. ಭೃಷ್ಟಚಾರವಿಲ್ಲದೆ ಪ್ರಾಮಾಣಿಕವಾಗಿ ಸರಕಾರಿ ನೌಕರರು ಕೆಲಸ ನಿರ್ವಹಿಸಬೇಕಾಗಿದ್ದು, ಸಾರ್ವಜನಿಕರಿಗೆ ಭೃಷ್ಟಚಾರ ರಹಿತ ಉತ್ತಮ ಸೇವೆಯನ್ನು ನೀಡಲು ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ವಿನಾಯಕ್ ಬಿಲ್ಲವ, ತಹಶೀಲ್ದಾರ್ ಶೈಲೇಶ್ ಪರಮಾನಂದ್, ಪೌರಾಯುಕ್ತರಾದ ಆರ್.ಎಸ್.ಪವಾರ್, ಲೋಕಾಯುಕ್ತ ಸಿಬ್ಬಂದಿಗಳಾದ ರಫೀಕ್, ನಾರಾಯಣ, ಪ್ರದೀಪ್ ರಾಣೆ, ಕೃಷ್ಣ, ಆನಂದ್, ಸಂಜೀವ್, ಮೆಹಬೂಬ್ ಅಲಿ, ಮಹೇಶ್ ಮತ್ತು ಹಳಿಯಾಳ ಹಾಗೂ ದಾಂಡೇಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಆನಂತರ ಸಾರ್ವಜನಿಕರಿಂದ ವಿವಿಧ ದೂರುಗಳನ್ನು ಸ್ವೀಕರಿಸಲಾಗಿ, ಕೆಲವು ದೂರುಗಳಿಗೆ ಸ್ಥಳದಲ್ಲಿಯೆ ಪರಿಹಾರ ನೀಡಲಾಯಿತು. ಸಾರ್ವಜನಿಕರಿಂದ ವಿವಿಧ ದೂರು ಅರ್ಜಿಗಳನ್ನು ಸ್ವೀಕರಿಸಲಾಯಿತು.