ಶಿರಸಿ: ಇತ್ತೀಚಿಗೆ ತಾಲೂಕಿನ ರಂಗಾಪುರದಲ್ಲಿ ನಿಗೂಢ ಖಾಯಿಲೆಗೆ ಬಲಿಯಾಗಿದ್ದ ಎರಡು ಕರುಗಳು ಗಂಟಲು ಬೇನೆ ರೋಗದಿಂದ ಮೃತಪಟ್ಟಿರುವುದು ರಕ್ತ ಪರೀಕ್ಷೆಯಿಂದ ತಿಳಿದುಬಂದಿರುವುದಾಗಿ ಪಶು ವೈಧ್ಯಾಧಿಕಾರಿ ಡಾ.ಗಜಾನನ ಹೊಸ್ಮನಿ ತಿಳಿಸಿದ್ದಾರೆ.
ಕಳೆದೆರಡು ವಾರದ ಹಿಂದೆ ಎರಡು ಕರುಗಳು ನಿಗೂಢ ಕಾಯಿಲೆಗೆ ಬಲಿಯಾಗಿದ್ದರಿಂದ ಸಹಜವಾಗಿಯೇ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ವೈದ್ಯರು ಸತ್ತ ಕರುಗಳ ಕಳೇಬರ ಪರೀಕ್ಷೆ ನಡೆಸಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದರು. ಇದೀಗ ವರದಿ ಬಂದಿದ್ದು, ಗಂಟಲು ಬೇನೆ ರೋಗದಿಂದ ಕರುಗಳು ಸತ್ತಿರುವುದು ದೃಢಪಟ್ಟಿದೆ.
ಜಾನುವಾರುಗಳಲ್ಲಿ ಉಸಿರಾಟದ ತೊಂದರೆ, ಜ್ವರ ಬರುವುದು ಗೊತ್ತಾದರೆ ಅದು ಗಂಟಲು ಬೇನೆಯ ಲಕ್ಷಣವಾಗಿದೆ. ಈಗಾಗಲೇ ಆ ಭಾಗದಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಲಾಗಿದ್ದು, ರೈತರು ಭಯ ಪಡುವ ಅವಶ್ಯಕತೆಯಿಲ್ಲವೆಂದು ಡಾ.ಗಜಾನನ ಹೊಸ್ಮನಿ ತಿಳಿಸಿದ್ದಾರೆ.