ಕಾರವಾರ: ವಾರ್ಷಿಪ್ ಮ್ಯೂಸಿಯಂ ಪಕ್ಕದಲ್ಲಿಯೇ ಹಿಂದೆ ಇದ್ದ ಪುಟಾಣಿ ರೈಲಿಗೆ ಮರು ಚಾಲನೆ ನೀಡುವ ಯೋಜನೆ ಇದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ವಾರ್ಷಿಪ್ ಮ್ಯೂಸಿಯಂ ಬಳಿ ನಡೆಯುತ್ತಿರುವ ಟುಪೆಲೋವ್ ಯುದ್ಧ ವಿಮಾನದ ಜೋಡಣಾ ಕಾರ್ಯ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾರ್ಷಿಪ್ ಮ್ಯೂಸಿಯಂ ಆವರಣದಲ್ಲಿಯೇ ಯುದ್ಧ ವಿಮಾನ ಮ್ಯೂಸಿಯಂ ಕೂಡ ನಿರ್ಮಾಣಗೊಳ್ಳುತ್ತಿರುವುದರಿಂದ ಪ್ರವಾಸಿಗರು ಇನ್ನಷ್ಟು ಆಕರ್ಶಿತರಾಗಲಿದ್ದಾರೆ. ಜತೆಗೆ ಯುವಜನರಿಗೆ, ಸೇನೆಗೆ ಸೇರಲು ಬಯಸುವವರಿಗೆ ಸ್ಫೂರ್ತಿ ತುಂಬಲಿದೆ ಎಂದರು.
ನಗರದ ಆಕರ್ಷಣೆಯಾದ ವಾರ್ಷಿಪ್ ಮ್ಯೂಸಿಯಂ ಹಲವು ದಿನಗಳಿಂದ ಸರಿಯಾದ ನಿರ್ವಹಣೆ ಕಂಡಿಲ್ಲ. ಯುದ್ದ ನೌಕೆಯ ಮೆಟ್ಟಿಲು ಸೇರಿದಂತೆ ಹಲವು ಭಾಗಗಳು ತುಕ್ಕು ಹಿಡುದು ಹಾಳಾಗಿದೆ. ಜತೆಗೆ ಕೆಲವು ಮುಖ್ಯ ಅಂಗಗಳು ಹಾಳಾಗಿದ್ದು ತಾಂತ್ರಿಕ ವರ್ಗದಿಂದಲೇ ರಿಪೇರಿ ಕಾರ್ಯ ನಡೆಯಬೇಕಿದೆ. ಹೀಗಾಗಿ ನೌಕಾನೆಲೆಗೆ ಸಂಬಂಧಿಸಿದ ತಾಂತ್ರಿಕ ವರ್ಗದವರಿಂದ ರಿಪೇರಿ ಮಾಡಿಸಲಾಗುತ್ತದೆ. ಈ ಬಗ್ಗೆ ನೌಕಾನೆಲೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ರಿಪೇರಿ ಕಾರ್ಯಕ್ಕೆ ನಗರೋತ್ಥಾನದ ಹಣವನ್ನು ಬಳಸಿಕೊಳ್ಳುತ್ತೇವೆ ಎಂದರು.
ಇಲ್ಲಿನ ಕಡಲತೀರದಲ್ಲಿ ಸ್ವಚ್ಛತೆಯ ಅವಶ್ಯಕತೆ ಇದೆ. ಹೀಗಾಗಿ ಮುಂದಿನ ದಿನದಲ್ಲಿ ಸಾರ್ವಜನಿಕರೊಂದಿಗೆ ಜಿಲ್ಲಾಡಳಿತ ಮತ್ತು ನಗರಸಭೆಯ ಸಿಬ್ಬಂದಿ ಸೇರಿ ಸ್ವಚ್ಛತೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತೇವೆ. ಬಳಿಕ ಕಸದ ತೊಟ್ಟಿಗಳು ಹಾಗೂ ಸೂಚನಾ ಫಲಕಗಳನ್ನು ಅಳವಡಿಸುತ್ತೇವೆ. ಸದ್ಯ ಕಡಲತೀರವನ್ನು ಸ್ವಚ್ಛಗೊಳಿಸುವ ಯಂತ್ರವು ಹಾಳಾಗಿದ್ದು, ಈ ಬಗ್ಗೆ ಪುಣೆಯ ಎಂಜಿನಿಯರ್‌ಗೆ ತಿಳಿಸಲಾಗಿದೆ. ಹೀಗಾಗಿ ರಿಪೇರಿಯಾದ ಬಳಿಕ ಮತ್ತೆ ಸ್ವಚ್ಛತಾ ಕಾರ್ಯ ನಡೆಸಲಿದೆ ಎಂದರು.
ಟ್ಯಾಗೋರ್ ಕಡಲತೀರದಲ್ಲಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಕೇಂದ್ರವನ್ನು ತೆರೆಯುತ್ತೇವೆ. ಪ್ರವಾಸಿಗರು ಸಮುದ್ರದಲ್ಲಿ ಈಜಲು ತೆರಳಿ ಪ್ರಾಣಾಪಾಯಕ್ಕೆ ಸಿಲುಕುತ್ತಾರೆ. ಹೀಗಾಗಿ ಜೀವ ರಕ್ಷಕ ಸಿಬ್ಬಂದಿಯ ಸೂಚನೆಯನ್ನು ಪಾಲಿಸಬೇಕು. ಕಡಲತೀರಗಳಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಜತೆಗೆ ಗೃಹರಕ್ಷಕ ಸಿಬ್ಬಂದಿಯನ್ನು ಕೂಡಾ ನಿಯೋಜನೆ ಮಾಡುತ್ತೇವೆ ಎಂದರು.