ಕುಮಟಾ: ಪಟ್ಟಣದ ಹೊಸಹಿತ್ತಲಿನ ಶ್ರೀಕಾಳಿಕಾ ಭವಾನಿ ದೇವಸ್ಥಾನದಲ್ಲಿ ವಿಶ್ವಕರ್ಮ ಮತ್ತು ಅದರ ಉಪಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಅಖಿಲ ಕರ್ನಾಟಕ ರಾಜ್ಯ ಸಂಘದ ಸೂಚನೆಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ದೈವಜ್ಞ ವಾಹಿನಿ ಮತ್ತು ಮಾತ್ರ ವಾಹಿನಿ ವತಿಯಿಂದ ವಿಶ್ವಕರ್ಮ ಮತ್ತು ಅದರ ಉಪಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಆಗಮಿಸಿದ ತಂಡವು ಜಿಲ್ಲೆಯ ಸಮಾಜ ಬಾಂಧವರ ಇತಿಹಾಸ, ಪರಂಪರೆ, ಧಾರ್ಮಿಕ ಆಚರಣೆ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಇತ್ಯಾದಿ ಮಾಹಿತಿಗಳನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವವರ ಮಾಹಿತಿಗಳನ್ನು ಪಡೆದುಕೊಂಡರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದಂತಹ ವಾಹಿನಿ ಸದಸ್ಯರು ಹಾಗೂ ಸಮಾಜ ಬಾಂಧವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ಅನಿಸಿಕೆ ಹಂಚಿಕೊಂಡರು. ಅಲ್ಲದೇ ವಾಹಿನಿಯ ಪ್ರಮುಖರು ಸಮಾಜದ ಇತಿಹಾಸ, ಪ್ರಸ್ತುತ ಸ್ಥಿತಿ ಇತ್ಯಾದಿ ಸಂಬಂಧಿಸಿದ ಮಾಹಿತಿಗಳ ದಾಖಲೆಗಳನ್ನು ಅಧ್ಯಯನ ಸಮಿತಿಯವರಿಗೆ ನೀಡಿದರು.
ಬಳಿಕ ಮಾತನಾಡಿದ ವಾಹಿನಿ ಕಾರ್ಯದರ್ಶಿ ಸತೀಶ ಶೇಟ್ ಅವರು, ಸಮಾಜ ಬಾಂಧವರ ಕಷ್ಟ ಮತ್ತು ವೃತ್ತಿಯಲ್ಲಿನ ಸಂಕಷ್ಟಗಳನ್ನು ಎಳೆ ಎಳೆಯಾಗಿ ತಿಳಿಸುವ ಜೊತೆಗೆ ಸರ್ಕಾರ ನಮ್ಮ ಸಮಾಜಕ್ಕೆ ನೀಡಿದ 2ಎ ಮೀಸಲಾತಿಯಿಂದ ಅನುಕೂಲವಾಗುತ್ತದೆ. ಹೀಗಾಗಿ ನಮ್ಮ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಯನ ಸಮಿತಿಯ ಡಾಕ್ಟರ್ ಮಹಾದೇವ, ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ದೈವಜ್ಞ ಬ್ರಾಹ್ಮಣರ ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ನೋಡಿದ್ದೇವೆ. 2ಎ ಮೀಸಲಾತಿ ಹಾಗೂ ಈ ಅಧ್ಯಯನ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ ಅವರು, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಜಿಲ್ಲೆಯ ಎಲ್ಲಾ ವಾಹಿನಿ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಡಾ.ಮಹಾದೇವ ಮತ್ತು ಡಾ.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ರಾಜ್ಯ ಸಂಘದ ವಲಯ್ಯಾಧ್ಯಕ್ಷ ರಾಮದಾಸ ಶೇಟ್ ಮುರ್ಡೇಶ್ವರ, ಕುಮಟಾ ತಾಲೂಕು ದೈವಜ್ಞ ಸಮಾಜ ಸಂಘದ ಅಧ್ಯಕ್ಷ ಮಧುಸೂದನ ಶೇಟ್, ಉತ್ತರ ಕನ್ನಡ ಜಿಲ್ಲಾ ದೈವಜ್ಞ ವಾಹಿನಿ ಮತ್ತು ಮಾತ್ರ ವಾಹಿನಿಯ ಊರ್ಮಿಳಾ ಶೇಟ್ ಹಾಗೂ ಸಮಾಜದ ವಿವಿಧ ತಾಲೂಕುಗಳ ಪ್ರಮುಖರು ಉಪಸ್ಥಿತರಿದ್ದರು.