ಕಾರವಾರ: ಇತ್ತಿಚಿನ ದಿನಗಳಲ್ಲಿ ನಮ್ಮ ಕಾರ್ಯ ವೈಖರಿಗಳು, ಜೀವನ ಶೈಲಿ, ಕೆಲಸದ ರೀತಿಯಲ್ಲಿ ಬದಲಾವಣೆಯಾಗಿವೆ ಇವುಗಳ ಒತ್ತಡದಲ್ಲಿ ಮನಸ್ಸಿನ ಅರೋಗ್ಯ ಕಳೆದುಕೊಳ್ಳದೆ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಮಾನಸಿಕ ಅಸ್ವಸ್ಥರಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್.ದರಗದ ಹೇಳಿದರು.
ಅವರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಮಾನಸಿಕ ಅರೋಗ್ಯ ದಿನಾಚರಣೆ – ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಶೇ 10ರಷ್ಟು ಜನರು ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿದ್ದು, ಅದರಲ್ಲಿ ಶೇ 1ರಷ್ಟು ಜನರು ಕೂಡ ಚಿಕಿತ್ಸೆ ಪಡೆಯಲು ಮುಂದಾಗುತ್ತಿಲ್ಲ. ಮಾನಸಿಕ ಅಸ್ವಸ್ಥಗೆ ಒಳಾಗದ ವ್ಯಕ್ತಿಗಳು ಕಂಡುಬಂದರೆ ಅವರನ್ನು ಸಮೀಪದ ಪೊಲೀಸರಿಗೆ ಒಪ್ಪಿಸಿ ಅವರು ಮುಂದಿನ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಇದರಲ್ಲಿ ಸಮಾಜ, ಪೊಲೀಸರು, ವೈದ್ಯರು ಹಾಗೂ ನ್ಯಾಯಾಧೀಶರ ಕರ್ತವ್ಯ ತುಂಬಾ ಇದೆ. ಈ ದೆಸೆಯಲ್ಲಿ ಎಲ್ಲರೂ ನಡೆಯೋಣ ಎಂದರು.
ಮಾನಸಿಕ ಅಸ್ವಸ್ಥರಿಗೆ ಕಾನೂನುನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಸಿಗಬೇಕಾದ ಸವಲತ್ತು ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ ಮಾತನಾಡಿ, ಮಾನಸಿಕ ಅರೋಗ್ಯ ಕಾಯಿಲೆ ಬರಲು ಮುಖ್ಯ ಕಾರಣ ಅನುಮಾನ, ಅವಮಾನ, ಅಪಮಾನ ಇವುಗಳನ್ನು ಮೆಟ್ಟಿನಿಂತರೆ ಯಾವ ಕಾಯಿಲೆಗಳು ಬರುವುದಿಲ್ಲ ಎಂದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋ ವೈಜ್ಞಾನಿಕ ವಿಭಾಗದ ಪ್ರಧ್ಯಾಪಕರು ಮತ್ತು ಮುಖ್ಯಸ್ಥರು ಡಾ.ವಿಜಯರಾಜ ಎನ್. ಪ್ರಾಸ್ತಾವಿಕ ಮಾತನಾಡಿ, ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಕರಣಗಳ ಏರಿಕೆಗೆ ನಮ್ಮ ಜೀವನಶೈಲಿ ಮತ್ತು ಕೌಟುಂಬಿಕ ರಚನೆಯಲ್ಲಿನ ಬದಲಾವಣೆಯು ಪ್ರಮುಖ ಕಾರಣವಾಗಿದೆ. ಮಾನಸಿಕ ಅರೋಗ್ಯ ತೊಂದರೆ ಇದ್ದರೆ ಮನೋವೈಜ್ಞಾನಿಕರಿಂದ ಚಿಕಿತ್ಸೆ ಪಡೆದುಕೊಳ್ಳಿ ಹಾಗೂ ತಮ್ಮ ದೈನಂದಿನ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಮಾನಸಿಕ ಅರೋಗ್ಯ ಕಾಯಿಲೆ ಹೋಗಲಾಡಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಗಜಾನನ ಎಚ್.ನಾಯಕ, ಇನ್‌ಸ್ಪೆಕ್ಟರ್ ರಮೇಶ್ ಎಸ್.ಹೂಗಾರ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ಶಿವಕುಮಾರ ಜಿ.ಎಲ್., ಕ್ರಿಮ್ಸ್ ಮುಖ್ಯಡಳಿತಧಿಕಾರಿ ಟಿ.ಸಿ ಹಾದಿಮನಿ, ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ಅಧಿಕಾರಿ ಅಧಿಕಾರಿ ಡಾ.ಶಂಕರ್‌ರಾವ್ ಇತರರು ಇದ್ದರು.