ಹಳಿಯಾಳ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಸದಸ್ಯರು ಪಟ್ಟಣದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು.
ತಾಲೂಕಿನ ತೇರಗಾಂವ ಗ್ರಾಮದಿಂದ ಹವಗಿ ಮೂಲಕ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆಗೆ ಮುತ್ತಲಮರಿಯ ಮಾಮೂಲಿ ಡೋಲು, ತಾಶಾ, ಸಾಂಪ್ರದಾಯಿಕ ವಾದ್ಯಗಳಿಂದ ಬರಮಾಡಿಕೊಳ್ಳಲಾಯಿತು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನಸಮೂಹ ಜೈಶ್ರೀರಾಮ, ಭಾರತ ಮಾತಾಕೀ ಜೈ ಘೋಷಣೆಗಳನ್ನು ಕೂಗಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಈ ವೇಳೆ ಮಾತನಾಡಿ, ಹಿಂದೂ ಧರ್ಮದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದಾಗಲೂ ಧರ್ಮವು ಈ ನೆಲದಲ್ಲಿ ನೆಲೆಯೂರಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನು ಇಂದಿನ ಪೀಳಿಗೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ಹಿಂದೂ ಸಮಾಜದ ಯುವಕರನ್ನು ಬಡಿದೆಬ್ಬಿಸಲು ಶೌರ್ಯ ಜಾಗರಣ ರಥ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ. ಭಾರತದ ಮೇಲೆ ಆಕ್ರಮಣ ನಡೆದಾಗಲೂ ಹಿಂದೂ ಧರ್ಮ ಉಳಿದಿದೆ. ಹಿಂದೂ ಧರ್ಮದ್ದು ಸೋಲಿನ ಇತಿಹಾಸವಲ್ಲ; ಪರಾಕ್ರಮದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ತಿಳಿಸುವುದು ಅಗತ್ಯವಿದೆ ಎಂದ ಅವರು, ವಿಹಿಂಪ ಸ್ಥಾಪನೆಯಾಗಿ ಅರವತ್ತು ವರ್ಷ ಹಾಗೂ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದೆ ಎಂದರು.
ಕೆಕೆ ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶ್ರೀಪತಿ ಭಟ್, ಪರಿಷತ್ ಹಾಗೂ ಬಜರಂಗ ದಳದ ಸದಸ್ಯರು, ಶೌರ್ಯ ಜಾಗರಣಾ ಪ್ರಮುಖರಾದ ಮಂಗೇಶ ದೇಶಪಾಂಡೆ, ಪೂಜಾ ಧೂಳಿ, ಶಾಂತಾ ಹಿರೇಕರ, ಜಯಲಕ್ಷ್ಮಿ ಚವ್ವಾಣ, ಅನಿಲ ಮುತ್ನಾಳೆ, ಚೂಡಪ್ಪ ಬೋಬಾಟಿ, ಸಂತೋಷ ಘಟಕಾಂಬಳೆ, ಸರ್ವೆಶ ಕೆ, ಚಂದ್ರಕಾಂತ ಕಮ್ಮಾರ, ಅನಿಲ ಗಿರಿ, ತಾನಾಜಿ ಪಟ್ಟೆಕರ ಇತರರು ಭಾಗವಹಿಸಿದ್ದರು.