ಶಿರಸಿ: ಜಿಲ್ಲೆಯಲ್ಲಿ ಸದ್ಯ ಲೋಕಸಭಾ ಚುನಾವಣಾ ಕಣ ಸಜ್ಜುಗೊಳ್ಳುತ್ತಿದೆ. ಕಣದಲ್ಲಿ ಪ್ರಮುಖ ಮೂರು ಪಕ್ಷಗಳಿಂದ ಆಕಾಂಕ್ಷಿಗಳ ಪಟ್ಟಿ ಬೆಳೆಯಲಾರಂಭಿಸಿದ್ದು, ಕಾಂಗ್ರೆಸ್‌ನಿಂದ ಅರಣ್ಯಭೂಮಿ ಹಕ್ಕು ಹೋರಾಟಗಾರ, ವಕೀಲ ರವೀಂದ್ರ ನಾಯ್ಕರ ಹೆಸರು ಕೂಡ ಕೇಳಿಬರಲಾರಂಭಿಸಿದೆ. ಜಿಲ್ಲೆಯ ಸಾಮಾಜಿಕ ಮತ್ತು ಭೂಮಿ ಹಕ್ಕಿನ ಹೋರಾಟದಲ್ಲಿ ಗುರುತಿಸಿಕೊಂಡು ಕಳೆದ 3- 4 ದಶಕಗಳಿಂದ ಜಿಲ್ಲೆ ಮತ್ತು ರಾಜ್ಯಗಳಲ್ಲಿ ನಿರಂತರ ಹೋರಾಟ, ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ರವೀಂದ್ರ ನಾಯ್ಕರ ಹೆಸರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.
ವಕೀಲ ವೃತ್ತಿಯ ಜೊತೆಯಲ್ಲಿ ಸಂಘಟನೆ- ಹೋರಾಟದ ಮೂಲಕವೇ ಜಿಲ್ಲೆಯ ಜನರಿಂದ ಗುರುತಿಸಿಕೊಳ್ಳುವ ರವೀಂದ್ರ ನಾಯ್ಕ, ಜಿಲ್ಲೆಯ ಬಹುದೊಡ್ಡ ಸಮಸ್ಯೆಯಾದ ಅರಣ್ಯವಾಸಿಗಳ ಕುರಿತು ಕಳೆದ 32 ವರ್ಷದಿಂದ ನಿರಂತರ ಹಳ್ಳಿಯಿಂದ- ಡೆಲ್ಲಿಯವರೆಗೂ ಹೋರಾಟಗಳನ್ನು ಹಮ್ಮಿಕೊಂಡು ಹಳ್ಳಿ ಹಳ್ಳಿಗಳಲ್ಲೂ ಚಿರಪರಿಚಿತರೆನೆಸಿಕೊಂಡಿದ್ದಾರೆ. ಸಾಮಾಜಿಕ ಅನ್ಯಾಯಕ್ಕೆ ಒಳಗಾಗಿದ್ದ ಕುಂಬ್ರಿ ಮರಾಠಿ, ಪಾಗಿ, ಕುಳವಾಡಿ ಮರಾಠಿ ಸಮಾಜಗಳ ಕುರಿತು ಪ್ರೊ.ರವಿವರ್ಮಕುಮಾರ ಶಾಶ್ವತ ಹಿಂದುಳಿದ ಆಯೋಗದ ಮುಂದೆ 1996- 97ರಲ್ಲಿ ವಾದಿಸಿ, ಈ ತಳ ಸಮುದಾಯಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ರವೀಂದ್ರ ನಾಯ್ಕ ಅತಿ ಹಿಂದುಳಿದವರ ಪಾಲಿಗೆ ಆಪತ್ಬಾಂಧವರೆನೆಸಿಕೊಂಡಿದ್ದಾರೆ.
ಚಿನ್ನಪ್ಪ ರೆಡ್ಡಿ ಆಯೋಗದಲ್ಲಿ ಜಿಲ್ಲೆಯ ಪಡ್ತಿ, ಗುನಗಿ, ಕುಳವಾಡಿ ಮರಾಠಿ ಮುಂತಾದ ಸಮಾಜದ ಮೀಸಲಾತಿ ಕುರಿತು ಅಂದಿನ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಗಮನ ಸೆಳೆದು, ಹೋರಾಟ ನಡೆಸಿ ನ್ಯಾಯ ಒದಗಿಸಿರುವುದು ಕೂಡ ಇವರ ವಿಶೇಷ. ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ತಪ್ಪಿರುವಂತಹ ಹಿಂದುಳಿದ ಜಾತಿಯನ್ನ ಜಸ್ಟಿಸ್ ಪಿ.ಕೆ. ಶ್ಯಾಮ್‌ಸುಂದರ ಆಯೋಗದ ಮುಂದೆ ಪ್ರತಿನಿಧಿಸಿರುವುದು ಅವರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿ ಹಲವರ ಹೆಸರಿದ್ದರೂ, ರವೀಂದ್ರ ನಾಯ್ಕರ ಹೆಸರು ಚಾಲ್ತಿಯಲ್ಲಿರಲು ಅವರ ನಿರಂತರ ಹೋರಾಟದ ಪರಿಶ್ರಮವೇ ಕಾರಣ ಹೊರತು ಹಣವಲ್ಲ ಎಂದರೆ ತಪ್ಪಾಗಲಾರದು. ಜಿಲ್ಲಾದ್ಯಂತ ಹೋರಾಟ ನಡೆಸಿ ಕಾರ್ಯಪಡೆಯನ್ನೇ ಸೃಷ್ಟಿಸಿಕೊಂಡಿರುವುದು ಅವರ ಹೋರಾಟದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ರವೀಂದ್ರ ನಾಯ್ಕರನ್ನೊಮ್ಮೆ ಜನಪ್ರತಿನಿಧಿಯಾಗಿ ನೋಡಬೇಕೆಂಬ ಮಹಾದಾಸೆ ಅರಣ್ಯವಾಸಿಗಳದ್ದು ಕೂಡ. ಮೂರು ದಶಕಗಳ ಕಾಲ ನಿಸ್ವಾರ್ಥವಾಗಿ ತಮ್ಮ ಪರವಾಗಿ ಹೋರಾಡಿದವನಿಗೆ ರಾಜಕೀಯ ನೆಲೆ ಕಲ್ಪಿಸಲು ಕೂಡ ಹೋರಾಟ ನಡೆಸುವುದರಲ್ಲಿ ತಪ್ಪಿಲ್ಲ ಎನ್ನುವ ಅರಣ್ಯವಾಸಿಗಳೂ ಇದ್ದಾರೆ. ಆದರೆ ಕಾಂಗ್ರೆಸ್ ಈ ಹೋರಾಟದ ನಾಯಕನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ ಸ್ಪರ್ಧೆಗಿಳಿಯಲು ವೇದಿಕೆ ನೀಡುತ್ತಾ ಅಥವಾ ಇಲ್ಲವಾ ಎನ್ನುವುದನ್ನ ಕಾದುನೋಡಬೇಕಿದೆ.
85 ಸಾವಿರ ಕುಟುಂಬಗಳ ಸಂಪರ್ಕ:
ಜಿಲ್ಲೆಯಲ್ಲಿ ಅರಣ್ಯವಾಸಿಗಳ ಕುರಿತು 32 ವರ್ಷಗಳಿಂದ 5 ಸಾವಿರಕ್ಕಿಂತ ಹೆಚ್ಚು ಹೋರಾಟ, ಸಭೆ, ಧರಣಿ, ಆಂದೋಲನ, ಉರುಳು ಸೇವೆ, ಪ್ರತಿಭಟನೆ ನಡೆಸುವ ಮೂಲಕ ಸುಮಾರು 85 ಸಾವಿರ ಕುಟುಂಬಗಳೊಂದಿಗೆ ರವೀಂದ್ರ ನಾಯ್ಕ ನಿರಂತರ ಸಂಪರ್ಕದಲ್ಲಿದ್ದಾರೆ. ಅರಣ್ಯವಾಸಿಗಳಿಗೆ ಸಣ್ಣಪುಟ್ಟ ಸಮಸ್ಯೆಗಳಾದರೂ ಅಲ್ಲಿ ಪ್ರತ್ಯಕ್ಷವಾಗುವ ರವೀಂದ್ರ ನಾಯ್ಕ, ನಿರಂತರ ಹೋರಾಟಗಳಿಂದ ಅರಣ್ಯವಾಸಿಗಳ ಕುಟುಂಬಗಳಲ್ಲಿ ಮನೆ ಮಾತಾಗಿದ್ದಾರೆ.
– ”ಅರಣ್ಯ ಅತಿಕ್ರಮಣದಾರರ ಹೋರಾಟದಲ್ಲಿ ರಾಜಕೀಯ ಮಾಡಲಾರೆ, ಬದಲಿಗೆ ಅವರಿಗಾಗಿ ರಾಜಕೀಯ ಮಾಡುವೆ. ಚುನಾವಣೆಗೆ ಟಿಕೆಟ್ ನೀಡುವುದು, ಬಿಡುವುದು ಪಕ್ಷದ ಪ್ರಮುಖರಿಗೆ ಬಿಟ್ಟಿದ್ದು. ಚುನಾವಣೆಗೆ ಸ್ಪರ್ಧಿಸಲಾರೆ ಎಂಬುದಕ್ಕೆ ನಾನೇನು ಸನ್ಯಾಸಿಯೂ ಅಲ್ಲ.”
– ರವೀಂದ್ರ ನಾಯ್ಕ, ಅರಣ್ಯಭೂಮಿ ಹಕ್ಕು ಹೋರಾಟಗಾರ