ಶಿರಸಿ: ಸಂಗೀತ ಕ್ಷೇತ್ರದಲ್ಲಿ ಅಭ್ಯಾಸ ಮಾಡುವವರು ಹಾಗೂ ಸಾಧನೆ ಹಂತದಲ್ಲಿರುವವರಿಗೆ ನಾನು ಅಥವಾ ನನ್ನಿಂದಲೇ ಎಂಬ ಅಹಂ ಭಾವನೆ ಇರಬಾರದು. ಹಾಗೆ ಬಂದರೆ ಸಂಗೀತ ಸಾಧನೆಯ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಹೆಸರಾಂತ ಗಾಯಕ, ಗಾನನಿಧಿ ಪಂಡಿತ ಗಣಪತಿ ಭಟ್ಟ ಹಾಸಣಗಿ ಅಭಿಪ್ರಾಯಪಟ್ಟರು.
ನಗರದ ಟಿಆರ್‌ಸಿ ಬ್ಯಾಂಕ್ ಸಭಾಭವನದಲ್ಲಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹತ್ತಾರು ಕನಸುಗಳನ್ನು ಹೊತ್ತು ನೂತನವಾಗಿ ಆರಂಭಗೊಂಡ ನಾದಾನುಸಂಧಾನ ಟ್ರಸ್ಟ್‌ನ ನಾಮಫಲಕ ಅನಾವರಣಗೊಳಿಸಿ, ನಾದೋಪಾಸನಂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಶಾಸ್ತ್ರೀಯ ಸಂಗೀತ ಕ್ಷೇತ್ರ ಆಳವಾಗಿದ್ದು ಅದರಲ್ಲಿ ಅಭ್ಯಸಿಸುವುದು ಬಹಳವಿದೆ. ಒಂದು ವ್ಯಕ್ತಿಯ ಜೀವಮಾನದಲ್ಲಿ ಪೂರ್ತಿ ಮಾಡಲಾಗದಷ್ಟು ಸಂಗೀತ ವಿಸ್ತಾರವಾಗಿದೆ. ಕಲಿತಷ್ಟು ಅಭ್ಯಾಸವನ್ನು ಅತ್ಯಂತ ಶ್ರದ್ಧೆಯಿಂದ ಕಲಿಯಬೇಕು ಎಂದರು.
ಇಂದು ಶಾಸ್ತ್ರೀಯ ಸಂಗೀತ ಕ್ಷೇತ್ರವೂ ಸಹಿತ ಕಮರ್ಷಿಯಲ್ ಆಗಿ ಒಂದರ್ಥದಲ್ಲಿ ಬ್ಯುಸಿನೆಸ್ ತರಹದಲ್ಲಿ ಕಲಿಸಲ್ಪಡುತ್ತಿರುವುದು ನೋವಿನ ಸಂಗತಿ. ಕಲಿತಿರುವ ಕೆಲವೇ ರಾಗಗಳನ್ನು ಸೋಷಿಯಲ್ ಮಿಡಿಯಾಗಳ ಮೂಲಕ ಹರಿಬಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಹಂತಕ್ಕೆ ಹೋಗದೆ ನಿಷ್ಠೆಯಿಂದ ನಿರಂತರವಾಗಿ ಅಭ್ಯಸಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಯೋಗ ಸಾಧಕ, ಅಷ್ಟಾಂಗ ಯೋಗ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ವಿಜಯಕುಮಾರ ಮಂಜರು ಪಾಡೇಶ್ವರ ಮಾತನಾಡಿ, ಯೋಗಕ್ಕೂ ಸಂಗೀತಕ್ಕೂ ಇರುವ ಮಹತ್ವ ವಿವರಿಸಿ ನಾದೋಪಾಸನಂ ಕುರಿತಾಗಿ ಹೇಳಿದರು. ವೇದಿಕೆಯಲ್ಲಿ ವಿ.ಕೃಷ್ಣ ಭಟ್ಟ ನೆಲೆಮಾಂವ ಉಪಸ್ಥಿತರಿದ್ದರು.
ಸಂಗೀತದ ರಸದೂಟ:
ನಂತರ ಆರಂಭಗೊಂಡ ವಿಶೇಷ ಸಂಗೀತ ಕಾರ್ಯಕ್ರಮದ ಸಂಗೀತ ಸಂಧ್ಯಾ ನಾದೋಪಾಸನಂನಲ್ಲಿ ಆರಂಭಿಕವಾಗಿ ಖ್ಯಾತ ಗಾಯಕ ಪಂಡಿತ ಕೃಷ್ಣೆಂದ್ರ ವಾಡೀಕರ ಹುಬ್ಬಳ್ಳಿ ಅವರು ತಮ್ಮ ಗಾಯನದಲ್ಲಿ ಗೌಡ್ ಮಲ್ಲಾರ್ ವಿಸ್ತಾರವಾಗಿ ಹಾಡಿದರು. ನಂತರ ಅಭಂಗ ಪ್ರಸ್ತುತಪಡಿಸಿದರು. ನಂತರದಲ್ಲಿ ನಡೆದ ಸಂಗೀತ ಸಂಧ್ಯಾದಲ್ಲಿ ಪಂ.ಹಾಸಣಗಿ ಅವರ ಶಿಷ್ಯೆ ಮೇಧಾ ಭಟ್ಟ ಅಗ್ಗೇರೆ ತಮ್ಮ ಗಾಯನದಲ್ಲಿ ರಾಗ ಘೋರಕ್ ಕಲ್ಯಾಣ ಹಾಡಿ ಖ್ಯಾತ ಸಾಹಿತಿ ಡಿವಿಜಿ ಅವರ ಕೃತಿಯನ್ನು ತಮ್ಮ ಸಂಯೋಜನೆಯಲ್ಲಿ ಹಾಡಿ ಮೆಚ್ಚುಗೆಗೆ ಪಾತ್ರರಾದರು. ನಂತರ ದಾಸರಪದ ಸಾದರಪಡಿಸಿದರು. ಹಾರ್ಮೊನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು ಮತ್ತು ತಬಲಾದಲ್ಲಿ ಗುರುರಾಜ ಹೆಗಡೆ ಆಡುಕುಳ, ಹಿನ್ನೆಲೆಯ ತಂಬೂರಾದಲ್ಲಿ ಶಿಲ್ಪಾ, ಕಾವ್ಯ, ತಾಳದಲ್ಲಿ ಅನಂತಮೂರ್ತಿ ಸಾಥ್ ನೀಡಿದರು.
ಪಂ.ಹಾಸಣಗಿ ಗಾಯನಕ್ಕೆ ತಲೆದೂಗಿದ ಪ್ರೇಕ್ಷಕರು:
ನಾದೋಪಾಸನಂ ಕೊನೆಯಲ್ಲಿ ಪಂ.ಗಣಪತಿ ಭಟ್ಟ ಹಾಸಣಗಿ ತಮ್ಮ ಸಂಗೀತ ಕಛೇರಿ ನಡೆಸಿಕೊಟ್ಟರು. ರಾಗ ಮಾರುಬಿಹಾಗ್‌ದಲ್ಲಿ ಹಾಡಿ ದೇವಿ ಕುರಿತಾದ ಜನಪ್ರಿಯ ಹಾಡು ಮಾತಾ ಭವಾನಿ ಜಯ ದುರ್ಗೆ ಹಾಡಿದಾಗ ಕಿಕ್ಕಿರಿದ ಕಲಾಭಿಮಾನಿಗಳು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು. ನಂತರ ಚಕೋರಂಗೆ ಚಂದಮನಾ ಬೆಳಕಿನಾ ಚಿಂತೆ ಹಾಡುತ್ತ ತರಾನಾದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು. ಹಾರ್ಮೊನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲಿ ಶ್ರೀಧರ ಮಾಂಡ್ರೆ ಹುಬ್ಬಳ್ಳಿ, ಹಿನ್ನೆಲೆಯ ಸಹಗಾನ, ತಾನ್ಪೂರದಲ್ಲಿ ಗಾಯಕ ವಿನಾಯಕ ಹೆಗಡೆ ಹಿರೇಹದ್ದ, ಆಶಾರಾಜ್ ಸಾಥ್ ನೀಡಿದರು.
ವಿವಿಧೆಡೆಯ ಕಲಾಭಿಮಾನಿಗಳು:
ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಷ್ಟೇ ಅಲ್ಲದೇ ಸಿದ್ದಾಪುರ, ಯಲ್ಲಾಪುರ, ಸಾಗರ, ಹೊನ್ನಾವರ, ಕೊಲ್ಲೂರು, ರಿಬ್ಬನ್‌ಪೇಟೆ, ಹುಬ್ಬಳ್ಳಿ ಸೇರಿದಂತೆ ಸಾವಿರದಷ್ಟು ಸಂಗೀತಾಭಿಮಾನಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಾದುನಸಂಧಾನ ಟ್ರಸ್ಟ್ನ ಮನೋಜ ಭಟ್ಟ ವೇದಘೋಷ ಮಾಡಿದರು. ಯೋಗ ಶಿಕ್ಷಕ ವಿ.ಪ್ರವೀಣ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ವಿ.ಗೋವಿಂದ ಅಡಿಗರು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ಕಲಾವಿದರನ್ನು ಪರಿಚಯಿಸಿ, ನಿರೂಪಿಸಿದರು.