ಬಾಗಲಕೋಟೆ:ಸಾವು ಎನ್ನುವುದು ಹೇಗೆ ಆವರಿಸಿಬಿಡುತ್ತದೆ ಎಂದು ಹೇಳುವುದೇ ಕಷ್ಟ. ಅವರು ಶುಕ್ರವಾರ ರಾತ್ರಿ ಕಾರಿಗೆ ಪೆಟ್ರೋಲ್ ಹಾಕಿಸಿದ್ದರು. ಪೆಟ್ರೋಲ್ ಪಂಪ್ನಿಂದ ಕಾರನ್ನು ಸ್ವಲ್ಪ ಮುಂದೆ ತಂದಿದ್ದರು. ಅಲ್ಲೇ ಕಾರನ್ನು ನಿಲ್ಲಿಸಿದ್ದರು. ಅಲ್ಲಿಂದ ಮುಂದೆ ಕಾರು ಚಲಿಸಲಿಲ್ಲ, ಅವರ ಬದುಕೂ ಸ್ತಬ್ಧವಾಗಿ ಹೋಗಿತ್ತು. ಆದರೆ, ಇದೆಲ್ಲ ಗೊತ್ತಾಗುವ ಹೊತ್ತಿಗೆ ಬೆಳಗಾಗಿ ಹೋಗಿತ್ತು. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಾಗಲಕೋಟೆ ಜಿಲ್ಲಾ ಮುಖಂಡ ಸಿದ್ದು ಚಿಕ್ಕದಾನಿ (45) ಅವರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ರೀತಿ.
ಸಿದ್ದು ಚಿಕ್ಕದಾನಿ ಅವರು ಬಾಗಲಕೋಟೆಯ ಆರೆಸ್ಸೆಸ್ ವಲಯದಲ್ಲಿ ಚಿರಪರಿಚಿತ ಹೆಸರು. ಅವರು ವಾಸವಾಗಿರುವುದು ಲೋಕಾಪುರ ಪಟ್ಟಣದಲ್ಲಿ. ಶುಕ್ರವಾರ ರಾತ್ರಿ ಅವರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಲೆಂದು ಪಂಪ್ಗೆ ತೆರಳಿದ್ದರು. ಅದಾಗಲೇ ಪಂಪ್ ಮುಚ್ಚುವ ಹೊತ್ತಾಗಿತ್ತು. ಪೆಟ್ರೋಲ್ ಹಾಕಿಕೊಂಡು ಹಣ ಕೊಟ್ಟು ಕಾರನ್ನು ಸ್ಟಾರ್ಟ್ ಮಾಡಿ ಸ್ವಲ್ಪ ಮುಂದೆ ಹೋಗಿ ಪೆಟ್ರೋಲ್ ಪಂಪ್ ಆವರಣದಲ್ಲೇ ಸೈಡಿಗೆ ನಿಲ್ಲಿಸಿದ್ದರು. ಶನಿವಾರ ಮುಂಜಾನೆ ಪೆಟ್ರೋಲ್ ಪಂಪ್ನ ಕಾರ್ಮಿಕರು ಬಂದು ನೋಡಿದರು. ಈ ಕಾರು ಯಾಕೆ ಇನ್ನೂ ಇಲ್ಲೇ ನಿಂತಿದೆ. ಸಿದ್ದು ಚಿಕ್ಕದಾನಿ ಅವರು ಏನು ಮಾಡುತ್ತಿದ್ದಾರೆ ಎಂದು ಹೋಗಿ ನೋಡಿದರೆ ಚಿಕ್ಕದಾನಿ ಅವರು ಅವರು ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತವರು ಕುಳಿತ ಹಾಗೇ ಇದ್ದಾರೆ. ಆದರೆ, ಉಸಿರು ಮಾತ್ರ ಇರಲಿಲ್ಲ. ಕೂಡಲೇ ಎಲ್ಲ ಸಂಬಂಧಿಕರಿಗೆ ತಿಳಿಸಲಾಯಿತು.
ಬಹುಶಃ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಮುಂದೆ ಸಾಗಿದ ಕೂಡಲೇ ಚಿಕ್ಕದಾನಿ ಅವರಿಗೆ ಎದೆ ಹಿಡಿದುಕೊಂಡಿದೆ. ಕೂಡಲೇ ಅವರು ಸಾವರಿಸಿಕೊಳ್ಳಲು ಕಾರನ್ನು ಸೈಡಿಗೆ ಹಾಕಿದ್ದಾರೆ. ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಅವರ ಕೈಯಲ್ಲಿ ಇರಲಿಲ್ಲ. ಆಗಲೇ ಹೃದಯಾಘಾತದಿಂದ ಪ್ರಾಣವೇ ಹೋಗಿದೆ.
ರಾತ್ರಿಯಾಗಿದ್ದರಿಂದ ಯಾರಿಗೂ ಕಾರಿನೊಳಗೆ ಯಾರೋ ಇದ್ದಾರೆ ಎನ್ನುವುದು ಗೊತ್ತಾಗಿಲ್ಲ. ಹೀಗಾಗಿ ಡ್ರೈವಿಂಗ್ ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾಗಿರುವ ಚಿಕ್ಕದಾನಿ ಅವರು ಸ್ವಲ್ಪ ದಪ್ಪಗಿದ್ದರು ಅನ್ನುವುದು ಬಿಟ್ಟರೆ ಆರೋಗ್ಯವಾಗಿಯೇ ಇದ್ದರು. ತುಂಬು ಚಟುವಟಿಕೆಯಲ್ಲಿದ್ದರು. ಹಾಗಿದ್ದರೂ 45ನೇ ವಯಸ್ಸಿಗೆ ಪ್ರಾಣ ಕಳೆದುಕೊಂಡಿದ್ದು ನೋಡಿ ಜನರು ಆತಂಕಿತರಾಗಿದ್ದಾರೆ