ಕುಮಟಾ: ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜನರ ಬಹುದಿನದ ಬೇಡಿಕೆ. ಆದರೆ ಸರ್ಕಾರ ಮಾತ್ರ ಈ ವರೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಾತ್ರ ಮುಂದಾಗಿಲ್ಲ. ಇದರ ನಡುವೆ ರಾಜಕಾರಣಿಗಳಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅನ್ನುವುದು ರಾಜಕೀಯದ ವಿಷಯ ವಸ್ತುವಾದಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಹನ್ನೆರಡು ತಾಲೂಕುಗಳಿದ್ದು ಈ ವರೆಗೆ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಸುಸಜ್ಜಿತ ಆಸ್ಪತ್ರೆಯಿಲ್ಲ. ಕಾರವಾರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಇದ್ದರು ಸಣ್ಣ ಪುಟ್ಟ ಸಮಸ್ಯೆಗಳ ಚಿಕಿತ್ಸೆ ಮಾತ್ರ ಈ ಆಸ್ಪತ್ರೆ ಸೀಮತ ಎನ್ನುವ ಆರೋಪವಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಅಪಘಾತವಾದ ವೇಳೆಯಲ್ಲಿ ಚಿಕಿತ್ಸೆ ನೀಡುವ, ಹೃದಯಾಘಾತ ಸೇರಿದಂತೆ ಗಂಭೀರ ಸಮಸ್ಯೆ ಇದ್ದ ವೇಳೆಯಲ್ಲಿ ಚಿಕಿತ್ಸೆ ಕೊಡುವ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜನರ ಆಗ್ರಹ. ಅಂಕೋಲಾ, ಕಾರವಾರ ಭಾಗದ ಜನರು ಗಂಭೀರ ಸಮಸ್ಯೆ ಎದುರಾದಾಗ ಅನಿವಾರ್ಯವಾಗಿ ಗೋವಾದ ಖಾಸಗಿ ಆಸ್ಪತ್ರೆಗೆ ತೆರಳಬೇಕಾಗಿದೆ.
ಇನ್ನು ಕುಮಟಾ, ಹೊನ್ನಾವರ, ಭಟ್ಕಳದ ಭಾಗದ ಜನರು ಮಂಗಳೂರು, ಉಡುಪಿಯ ಆಸ್ಪತ್ರೆಗೆ ತೆರಳಿದರೆ, ಶಿರಸಿ, ಸಿದ್ದಾಪುರ ಭಾಗದ ಜನರು ಶಿವಮೊಗ್ಗದ ಆಸ್ಪತ್ರೆಗಳಿಗೆ, ಹಳಿಯಾಳ, ದಾಂಡೇಲಿ, ಮುಂಡಗೋಡ, ಯಲ್ಲಾಪುರ, ಜೋಯಿಡಾ ಭಾಗದ ಜನರು ಹುಬ್ಬಳ್ಳಿ, ಧಾರವಾಡದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟೋ ಜನ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟ ಘಟನೆಗಳಿದ್ದು ನಮ್ಮ ಜಿಲ್ಲೆಯಲ್ಲಿಯೇ ಎಲ್ಲಾ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವ ಆಸ್ಪತ್ರೆ ಇದ್ದರೇ ನೂರಾರು ಜನರ ಪ್ರಾಣ ಉಳಿಯುತ್ತದೆ ಎನ್ನುವುದು ಜನರ ಆಗ್ರಹ. ಆದರೆ ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ರಾಜಕಾರಣಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಎನ್ನುವುದು ರಾಜಕೀಯ ವಸ್ತುವಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತ ವಿದ್ದ ವೇಳೆಯಲ್ಲಿ ಕಾಂಗ್ರೆಸ್ಸಿನ ಹಲವು ನಾಯಕರು ತಾವು ಅಧಿಕಾರಕ್ಕೆ ಬಂದ ತಕ್ಷಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ ಎಂದಿದ್ದರು. ಆದರೆ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾದರು ಇನ್ನೂ ಯಾವ ಕ್ರಮ ಕೈಗೊಂಡಿಲ್ಲ. ಇನ್ನು ಬಿಜೆಪಿ ನಾಯಕರು ಅಧಿಕಾರದಲ್ಲಿ ಇದ್ದ ವೇಳೆಯಲ್ಲಿ ಆಸ್ಪತ್ರೆ ಕಾಮಗಾರಿಗೆ ಚಾಲನೆ ಕೊಡುವ ಕಾರ್ಯಕ್ಕೆ ಮುಂದಾಗಿರಲಿಲ್ಲ. ಬದಲಾಗಿ ಸದ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರವನ್ನ ಇಟ್ಟುಕೊಂಡು ಕಾಂಗ್ರೆಸ್ಸಿನ ನಾಯಕರ ಕಾಲನ್ನ ಎಳೆಯುವ ಕೆಲಸಕ್ಕೆ ಇಳಿದಿದ್ದು ಆಸ್ಪತ್ರೆ ನಿರ್ಮಾಣ ವಿಚಾರ ಅನ್ನುವುದು ರಾಜಕೀಯ ಆರೋಪ ಪ್ರತ್ಯಾರೋಪ ಮಾಡುವ ವಿಚಾರವಾದಂತಾಗಿದೆ. ಸರ್ಕಾರ ಇನ್ನಾದರು ಗಮನಹರಿಸಿ ರಾಜಕೀಯ ಮಾಡುವ ಬದಲು ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ ಎನ್ನುವುದು ಜನರ ಆಗ್ರಹವಾಗಿದೆ.
ಪ್ರತಿಭಟನೆಗೂ ಅಸ್ತ್ರವಾದ ವಿಷಯ:
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರ ಹೋರಾಟ ಮಾಡುತ್ತೇವೆ ಎನ್ನುವವರಿಗೂ ಅಸ್ತ್ರವಾಗಿದ್ದು ಜಿಲ್ಲೆಯಲ್ಲಿ ನಿರಂತರ ಹೋರಾಟ ಮಾಡುವವರು ಇಲ್ಲದಂತಾಗಿದೆ. ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ವಿಚಾರದಲ್ಲಿ ಅಭಿಯಾನಗಳೇ ನಡೆದಿದ್ದವು. ಜಿಲ್ಲೆಯ ಹಲವು ಭಾಗದಲ್ಲಿ ಹೋರಾಟ ನಡೆದಿದ್ದು ಹೋರಾಟ ಬೆಂಗಳೂರಿನ ವರೆಗೂ ತಲುಪಿತ್ತು. ಜನರ ಹೋರಾಟಕ್ಕೆ ಅಂದು ಹೆದರಿದ್ದ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಿ ಸರ್ಕಾರ ಸಹ ಸ್ಪಂದಿಸಿತ್ತು.
ಸದ್ಯ ನಿರಂತರವಾಗಿ ಹೋರಾಟ ಮಾಡುವವರು ಇಲ್ಲದಂತಾಗಿದ್ದು ಕೆಲ ಮುಖಂಡರು ಇದೇ ವಿಚಾರವನ್ನ ಹೋರಾಟದ ಅಸ್ತ್ರವಾಗಿಟ್ಟುಕೊಂಡು ಆಗೊಮ್ಮೆ ಈಗೊಮ್ಮೆ ಹೇಳಿಕೆ ನೀಡುತ್ತಿರುವುದನ್ನ ಬಿಟ್ಟರೇ ಜಿಲ್ಲೆಯಲ್ಲಿ ಎಲ್ಲಾ ಭಾಗದಲ್ಲಿ ಗಟ್ಟಿ ಧ್ವನಿ ಎತ್ತುವವರು ಇಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹ. ಸದ್ಯ ಜಿಲ್ಲೆಯಲ್ಲಿ ಮತ್ತೊಮ್ಮೆ ದೊಡ್ಡ ಹೋರಾಟವೇ ನಡೆದರೆ ಸರ್ಕಾರ ಕಣ್ತೆರದು ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಮುಂದಾಗಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.