ಸಿದ್ದಾಪುರ: ಎಲೆಚುಕ್ಕೆ ರೋಗ ಕಾಣಿಸಿಕೊಂಡಿರುವ ಅಡಿಕೆ ತೋಟಗಳಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸೂಕ್ತ ಸಲಹೆ-ಸೂಚನೆ ನೀಡುವಂತೆ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ತೋಟಗಾರಿಕೆ ಇಲಾಖೆಯ ವತಿಯಿಂದ ತಾಲೂಕಿನ ವಾಜಗದ್ದೆಯ ದುರ್ಗಾ ವಿನಾಯಕ ಸಭಾಭವನದಲ್ಲಿ ಶುಕ್ರವಾರ ನಡೆದ ಅಡಿಕೆಯಲ್ಲಿ ಎಲೆ ಚುಕ್ಕೆ ರೋಗ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪಾರಂಪರಿಕವಾಗಿ ಬೆಳೆಯುತ್ತಿರುವ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ತಜ್ಞರ ಸಲಹೆ ಪಡೆದು ತೋಟವನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ. ರೈತರು ದೃತಿಗೆಡದೇ ಇರುವಂತೆ ನೋಡಿಕೊಳ್ಳಬೇಕಾದದ್ದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ. ತೋಟಗಳಲ್ಲಿ ಕಾಣಿಸಿಕೊಂಡಿರುವ ಖಾಯಿಲೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರಿಗಳು ಸ್ಥಳಕ್ಕೆ ಖುದ್ದು ತೆರಳಿ ಎನೇನು ನ್ಯೂನ್ಯತೆ ಇದೆ ಎಂಬುದನ್ನು ಕಂಡು ಕೊಂಡು ಸೂಕ್ತ ಸಲಹೆ ನೀಡಬೇಕು. ಕಾಲಕಾಲಕ್ಕೆ ಮಣ್ಣು ಪರೀಕ್ಷೆ ನಡೆಸಬೇಕು. ಬೆಳೆಗಾರರು ನಿರ್ಲಕ್ಷ ತೋರದೇ ಕಾಲ ಕಾಲಕ್ಕೆ ಔಷಧಿ ಸಿಂಪಡಿಸಬೇಕು. ಸರ್ಕಾರ ಜಿಲ್ಲೆಯ ತೋಟಿಗರ ಜತೆ ನಿಲ್ಲಲಿದೆ. ರೈತರು ಅಡಿಕೆಯೊಂದಕ್ಕೆ ಮಾತ್ರ ಅವಲಂಭಿತರಾಗದೇ ಮೆಣಸು, ಕಾಫಿ ಮತ್ತಿತರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಪ್ರದೇಶವಿದ್ದು, 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಇತ್ತೀಚೆಗೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗ ಕಾಣಿಸಿಕೊಳ್ಳುತ್ತಿದೆ. ಶೀಲಿಂದ್ರ ಒಂದರಿಂದ ಹರಡುವ ರೋಗ ಇದಾಗಿದ್ದು, ಈ ಬಾರಿ 8600 ಹೆಕ್ಟೇರ್ ಪ್ರದೇಶದಲ್ಲಿ ರೋಗ ಕಾಣಿಸಿಕೊಂಡಿದೆ. ಜಿಲ್ಲೆಯ ರೈತರು ಬಹು ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದರು.
ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸಿದ್ದಾರ್ಥ ದೇಸಾಯಿ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ತೋಟಗಾರಿಕಾ ವಿಜ್ಞಾನಿ ವಿನಾಯಕ ಹೆಗಡೆ, ಗ್ರಾಪಂ ಸದಸ್ಯರಾದ ವಿಶಾಲಾಕ್ಷಿ ಹಸ್ಲರ್, ಅನಂತ ಹೆಗಡೆ, ಅಘನಾಷಿಸಿ ಸಾಂಬಾರ ಮಂಡಳಿ ಅಧ್ಯಕ್ಷ ಎಸ್.ಆರ್.ಹೆಗಡೆ, ಹಾರ್ಸಿಕಟ್ಟಾ ಸೊಸೈಟಿ ಅಧ್ಯಕ್ಷ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅರುಣ ಎಚ್.ಜಿ.ಸ್ವಾಗತಿಸಿದರು. ಗಣಪತಿ ಹೆಗಡೆ ವಂದಿಸಿದರು. ಸಂಜಯ ಹೆಗಡೆ ಹಾಗೂ ವಿನಾಯಕ ಪೇಟೆಸರ ನಿರೂಪಿಸಿದರು.