ಶಿರಸಿ: ತಾಲೂಕಿನ ಕೊಡ್ನಗದ್ದೆಯ ಹೊನ್ನೆಹಕ್ಕಲಿನ ಶರತ್ ಕೊಠಾರಿ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಡಿ ಬರುವ ರಾಜಸ್ಥಾನದ ಜೋಧಪುರದ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ಕೃಷಿಕ ಮಂಜುನಾಥ ಕೊಠಾರಿ ಹಾಗೂ ಸಾವಿತ್ರಿ ದಂಪತಿಯ ಪುತ್ರನಾದ ಇವರು, ಹಾಸನ ಕೃಷಿ ವಿದ್ಯಾಲಯದಿಂದ ಪದವಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಕೃಷಿ ಮಣ್ಣು ಹಾಗೂ ಕೃಷಿ ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಐಸಿಎಆರ್- ಜೆಎಎಫ್ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದು ಶಿಷ್ಯವೇತನ ಪಡೆದಿದ್ದಾರೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ನ್ಯಾನೋ ಕ್ಲೇ ಬಯೋಪಾಲಿಮರ್ ರಾಸಾಯನಿಕ ಗೊಬ್ಬರಗಳ ಮೇಲೆ ನಡೆಸಿದ ಸಂಶೋಧನೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಚಿನ್ನದ ಪದಕ ಹಾಗೂ ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಯ ಚಿನ್ನದ ಪದಕವನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ರಿಂದ ಸ್ವೀಕರಿಸಿದ್ದಾರೆ.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಚಿನ್ನದ ಪದಕದ ಜೊತೆ ಒಟ್ಟು 13 ಚಿನ್ನದ ಪದಕಗಳೊಂದಿಗೆ 2019 ರಲ್ಲಿ ಕೃಷಿ ಪದವಿ ಪಡೆದಿದ್ದಾರೆ. ಇದೀಗ ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಇವರ ಈ ಸಾಧನೆಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.