ಯಲ್ಲಾಪುರ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ರಾಘವೇಂದ್ರ ಆಶ್ರಯ ನಿಲಯ ಹಾಗೂ ಇನ್ನಿತರ ಇಲಾಖೆಗಳ ಆಶ್ರಯದಲ್ಲಿ, ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಪಟ್ಟಣದ ರಾಘವೇಂದ್ರ ಆಶ್ರಯ ನಿಲಯದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಬಿ.ಹಳ್ಳಾಕಾಯಿ, ಸಮಾಜಕ್ಕೆ ಹಿರಿಯ ಕೊಡುಗೆಗಳನ್ನು ಗುರುತಿಸುವ ಮತ್ತು ಅಂಗೀಕರಿಸುವುದೇ ನಾಗರಿಕರ ದಿನವಾಗಿದೆ. ಹಿರಿಯ ನಾಗರಿಕರ ಸೇವೆಗಳನ್ನು, ಸಾಧನೆಗಳನ್ನು, ಅವರು ಜೀವನದಲ್ಲಿ ನೀಡಿದ ಸಮರ್ಪಣೆಯನ್ನು ಪ್ರಶಂಸಿಸಲು ಒಂದು ಅವಕಾಶವಾಗಿದೆ. ನಮ್ಮ ಸಮುದಾಯದಲ್ಲಿರುವ ಹಿರಿಯರಿಗೆ ಪ್ರೋತ್ಸಾಹ, ಬೆಂಬಲ ಮತ್ತು ಸೇವೆಗಳನ್ನು ನೀಡಬೇಕಾಗಿರುವುದು ನಮ್ಮ ಜವಾಬ್ದಾರಿ. ವಯಸ್ಸಾದ ಮೇಲೆ ಪರಿಣಾಮ ಬೀರುವ ಅಂಶಗಳು ಸಮಸ್ಯೆಗಳ ಅರಿವು ಹೆಚ್ಚಿಸಲು ಹಾಗೂ ಸಮಾಜಕ್ಕೆ ಹಿರಿಯರ ಕೊಡುಗೆಗಳನ್ನು ಗುರುತಿಸಿ ಗೌರವಿಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ವಕೀಲ ಎನ್.ಕೆ.ಭಾಗ್ವತ್, ಹಿರಿಯ ನಾಗರಿಕರ ಇತಿಹಾಸ ೧೯೮೮ರ ಹಿಂದಿನದ್ದಾಗಿದ್ದು, ಜೀವನದುದ್ದಕ್ಕೂ ಹಿರಿಯರು ಮಾಡಿರುವ ಸಾಧನೆ ಗೌರವಗಳನ್ನು ಕೃತಜ್ಞತೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಲು ಇಂತಹ ವೇದಿಕೆ ಸಾಕ್ಷಿಯಾಗಿದೆ. ವಯಸ್ಸಾದ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಪ್ರಜ್ಞೆ ಹೆಚ್ಚಿಸಲು ಇಂತಹ ಕಾರ್ಯಕ್ರಮ ಅವಶ್ಯಕತೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರುಗಳಾದ ಝೀನತ್‌ಬಾನು ಶೇಖ, ಪ್ಯಾರಾ ಲೀಗಲ್ ವಕೀಲರಾದ ನಾಗರಾಜ ಭೋವಿವಡ್ಡರ್, ಮಂಜುನಾಥ ಹೆಗಡೆ, ಆರ್ ಬಿ ಪಾಟೀಲ್, ಶ್ಯಾಮ ಪಾವಸ್ಕರ್ ಉಪಸ್ಥಿತರಿದ್ದರು.
ಪ್ಯಾರಾ ಲೀಗಲ್ ವಾಲಂಟೀಯರ್ ಸುಧಾಕರ ನಾಯಕ ಸ್ವಾಗತಿಸಿ, ನಿರೂಪಿಸಿದರು. ಎಲ್ಲ ಹಿರಿಯ ನಾಗರಿಕರಿಗೆ ಹಣ್ಣು ಹಂಪಲ ನೀಡಿ ಗೌರವಿಸಲಾಯಿತು.