ಶಿರಸಿ: ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ ವಾಹನಗಳ ಎಚ್ಎಸ್ಆರ್ಪಿ (ಹೈ ಸೆಕ್ಯೂರಿಟಿ ರಜಿಸ್ಟ್ರೇಶನ್ ಪ್ಲೇಟ್) ಹೊಸ ನಂಬರ್ ಪ್ಲೇಟ್ಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಥವಾ ವಾಹನಗಳ ಅಧಿಕೃತ ಡೀಲರ್ ಕೇಂದ್ರಗಳಲ್ಲಿ ಅಳವಡಿಸಿಕೊಳ್ಳಬೇಕೋ ಎಂಬ ಗೊಂದಲ ಗ್ರಾಹಕರಲ್ಲಿ ಸೃಷ್ಟಿಯಾಗಿದೆ.
ಹಳೆಯ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ನಿಯಮವನ್ನು ಸಾರಿಗೆ ಇಲಾಖೆಯು ಕಡ್ಡಾಯಗೊಳಿಸಿದ್ದು, 2009ರ ಎಪ್ರೀಲ್ 1 ಕ್ಕಿಂತ ಪೂರ್ವದಲ್ಲಿ ನೋಂದಣಿ ಆಗಿರುವ ಹಳೆ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಅತ್ಯವಶ್ಯವಾಗಿ ಮಾಡಿಕೊಳ್ಳಬೇಕು ಎಂಬ ಸೂಚನೆ ಈಗಾಗಲೇ ನೀಡಲಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನ, ಲಘು ಮೋಟಾರು, ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರುಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಕಳೆದ ತಿಂಗಳ ಅವಧಿಯಲ್ಲಿ ಈ ಪ್ಲೇಟ್ ಅಳವಡಿಕೆ ಪ್ರಾರಂಭವಾಗಿದ್ದರೂ, ಸಾಕಷ್ಟು ಜನರಿಗೆ ಇದರ ಮಾಹಿತಿಯಿಲ್ಲ. ಕೆಲವರಿಗೆ ಇದರ ಮಾಹಿತಿ ದೊರೆಯುತ್ತಿದ್ದಂತೆ ಸಾರಿಗೆ ಇಲಾಖೆ ಕಚೇರಿಗೆ ಹಾಗೂ ಏಜೆಂಟರ ಬಳಿ ಅಲೆದಾಡಿ ಸುತ್ತಾಡುತ್ತಿದ್ದಾರೆ.
ನಕಲಿ ನಂಬರ್ ಪ್ಲೇಟ್ ಮತ್ತಿತರ ಸಮಸ್ಯೆಗಳಿಗೆ ಕಡಿವಾಣ ಹಾಕಲು ಈ ನಿಯಮವನ್ನು ಸರ್ಕಾರ ಕಡ್ಡಾಯ ಮಾಡಿದೆ. ಅಲ್ಯುಮಿನಿಯಂಯುಕ್ತ ಈ ಪ್ಲೇಟ್ ತುಂಡಾಗದು. ಜತೆಯಲ್ಲಿ ಈ ಫಲಕದ ಮೇಲೆ ಲೇಸರ್ ತಂತ್ರಜ್ಞಾನದಲ್ಲಿ ಅಕ್ಷರಗಳನ್ನು ಮುದ್ರಿಸಲಾಗುತ್ತದೆ. ಪ್ರತಿಯೊಂದು ನಂಬರ್ ಪ್ಲೇಟ್ಗಳು ಒಂದು ಸಿರಿಯಲ್ ನಂಬರ್ ಕೊಡಲಾಗುತ್ತದೆ. ಈ ನಂಬರ್ನ್ನು ಸಾರಿಗೆ ಇಲಾಖೆಯ ವಾಹನ-೪ ತಂತ್ರಾAಶಕ್ಕೆ ಜೋಡಣೆ ಮಾಡಲಾಗಿರುತ್ತದೆ. ಇಂಜಿನ್ ಸಂಖ್ಯೆ, ಚಸ್ಸಿ ಸಂಖ್ಯೆ, ನೋಂದಣಿ ಸಂಖ್ಯೆ, ವಿಮೆ, ಮಾಲಿಕರ ಮಾಹಿತಿ ನಮೂದಾಗಿರುತ್ತದೆ. ೧೦ ಪಿನ್ ನಂಬರ್ ಒಳಗೊಂಡಿರುವ ವಿಶಿಷ್ಟ ಗುರುತಿನ ಸ್ಟಿಕ್ಕರ್ ಎಡಭಾಗದಲ್ಲಿ ಅಂಟಿಸಲಾಗುತ್ತದೆ.
ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ತಾಲೂಕು ಒಳಗೊಂಡಿರುವ ಶಿರಸಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ 2009ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಒಟ್ಟೂ ೧.೪೮ ಲಕ್ಷಕ್ಕೂ ಅಧಿಕ ಬೈಕ್, ಕಾರು ಮತ್ತಿತರ ವಾಹನಗಳಿವೆ. ಇವುಗಳಲ್ಲಿ ಒಂದಷ್ಟು ವಾಹನಗಳಿಗೆ ಎಚ್.ಎಸ್.ಆರ್.ಪಿ ನಂಬರ್ ಫಲಕ ಅಳವಡಿಕೆಯಗಿದ್ದು, ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಹೊಸ ನಂಬರ್ ಪ್ಲೇಟ್ ಆಗಬೇಕಾಗಿರುವುದು ಬಾಕಿ ಉಳಿದಿದೆ ಎಂಬುದು ತಿಳಿದು ಬಂದಿದೆ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ನ.೧೭ ಕೊನೆಯ ದಿನಾಂಕವಾಗಿದ್ದು, ಅದರ ನಂತರ ಅಳವಡಿಸದಿದ್ದರೆ ಪ್ರತಿ ವಾಹನಕ್ಕೂ ೫೦೦ ರೂ. ದಂಡ ವಿಧಿಸಲಾಗುತ್ತದೆ. ಅಧಿಕೃತ ವಾಹನ ಡೀಲರ್ಗಳು ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಡುತ್ತಿದ್ದಾರೆ. ವಾಹನ ಮಾಲೀಕರು ಅಲ್ಲಿಗೆ ಭೇಟಿ ನೀಡಿ, ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಶಿರಸಿ ಆರ್ಟಿಓ ಯಲ್ಲಪ್ಪ ಪಡಸಾಲಿ ತಿಳಿಸಿದರು.