ಮುಂಡಗೋಡ: ತಾಲೂಕಿನ ಟಿಬೇಟ್ ಕ್ಯಾಂಪ್ ನ ಮನೆಯೊಂದಕ್ಕೆ ನುಗ್ಗಿ ಲಕ್ಷಂತಾರ ನಗನಾಣ್ಯ ದರೋಡೆಮಾಡಿದ್ದ ನಾಲ್ವರು ದರೋಡೆಕೋರರಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
2019ರ ಜನವರಿ 19ರಂದು ಟಿಬೇಟ್ ಕ್ಯಾಂಪ್ ನಂ.1ರಲ್ಲಿ ಜಾನ್‌ಚುಪ್ ರಿಚನ್ ತೆನಜಿಂಗ್ ಎನ್ನುವವನ ಮನೆಗೆ ಡಕಾಯಿತರು ನುಗ್ಗಿ ಸುಮರು ಲಕ್ಷಾಂತರ ರೂಪಾಯಿ ನಗದು, ಬೆಲೆಬಾಳುವ ಮೊಬೈಲ್, ಐಪ್ಯಾಡ್, ಸಿಸಿಟಿವಿಗಳನ್ನ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಮಾರಕಾಸ್ತ್ರ ತೋರಿಸಿ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣ ಇಡೀ ತಾಲೂಕಿನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹೊರ ರಾಜ್ಯದಿಂದ ಬಂದ ದರೋಡೆಕೋರರು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಇನ್ನು ಪ್ರಕರಣವನ್ನ ಪೊಲೀಸ ಇಲಾಖೆ ಗಂಭೀರವಾಗಿ ತೆಗೆದುಕೊಂಡು ದರೋಡೆಕೋರನ್ನು ಹಿಡಿಯಲು ತಂಡವನ್ನ ರಚಿಸಿತ್ತು.
ಅಂದಿನ ಮುಂಡಗೋಡ ಪೊಲೀಸ್ ಠಾಣೆಯ ಪಿ.ಐ ಆಗಿದ್ದ ಶಿವಾನಂದ ಚಲವಾದಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮುಂಡಗೋಡಿನ ಗಾಂಧಿನಗರ ನಿವಾಸಿ ವಸಂತ ಕರಿಯಪ್ಪ ಕೊರವರ(28), ಆನಂದನಗರದ ಮಂಜು ಅರ್ಜುನ್ ನವಲೆ(23), ಆನಂದ ನಗರದ ಕಿರಣ ಪ್ರಕಾಶ(23), ಬಸಾಪುರ ಗ್ರಾಮದ ಮಧುಸಿಂಗ್ ಗಂಗಾರಾಮಸಿ0ಗ್ ರಜಪೂತ(24) ಎನ್ನುವವರನ್ನ ಬಂಧಿಸಿದ್ದರು. ಪ್ರಕರಣದ ಕುರಿತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸುಧೀರ್ಘವಾದ ವಿಚಾರಣೆ ನಡೆಸಿದ್ದು ಅಂತಿಮವಾಗಿ ನ್ಯಾಯಾಧೀಶರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ದರೋಡೆ ಮಾಡಿದ ನಾಲ್ವರು ಆರೋಪಿಗಳಿಗೆ ಐ.ಪಿ.ಸಿ ಕಲಂ 395ರನ್ವಯ ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಹಾಗೂ ಎಲ್ಲಾ ಆರೋಪಿಗಳಿಗೆ ತಲಾ 10 ಸಾವಿರ ರೂಪಾಯಿ ದಂಡ ಕಟ್ಟಲು, ಒಂದೊಮ್ಮೆ ಹಣ ಕಟ್ಟದೇ ಇದ್ದರೇ 1 ವರ್ಷ ಕಾರಾಗೃಹ ಶಿಕ್ಷೆಯನ್ನ ನೀಡಿ ಆದೇಶಿಸಲಾಗಿದೆ. ಇದಲ್ಲದೇ ಐಪಿಸಿ 397 ರನ್ವಯ ಏಳು ವರ್ಷ ಕಠಿಣ ಶಿಕ್ಷೆ ಹಾಗೂ ಆರೋಪಿಗಳಿಗೆ ತಲಾ 5 ಸಾವಿರ ರೂಪಾಯಿ ದಂಡ ಒಂದೊಮ್ಮೆ ದಂಡ ಕಟ್ಟದೇ ಇದ್ದರೇ ಆರು ತಿಂಗಳ ಕಾರಾಗೃಹ ಶಿಕ್ಷೆಯನ್ನ ನೀಡಿ ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ಪ್ರಕರಣದ ವಿದ್ಯಮಾನಗಳನ್ನ ಹಾಗೂ ಸಾಕ್ಷಿದಾರರ ಸಾಕ್ಷಿಯನ್ನ ಗಂಭೀರವಾಗಿ ತೆಗೆದುಕೊಂಡು ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸುಧೀರ್ಘ ವಾದ ಮಂಡಿಸಿದ್ದರು.