ಹೊನ್ನಾವರ: ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿ ಕೊಡಲು ಇನ್ನೂ ಹಿಂದೇಟು ಹಾಕಲಾಗುತ್ತಿದೆ. ಇದರ ಪರಿಣಾಮ ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿಯೇ ಜಿಲ್ಲೆಯಲ್ಲಿ ಮಾರಾಟ ಆಗುವ ಮರಳಿನ ಬೆಲೆ ದುಪ್ಪಟ್ಟು ಏರಿಕೆಯಾಗಿದ್ದು ಮರಳನ್ನ ಮನೆಗಳ ನಿರ್ಮಾಣಕ್ಕೆ ತೆಗೆದುಕೊಳ್ಳಲು ಜನರು ಪರದಾಟ ನಡೆಸುವಂತಾಗಿದೆ.
ಸಿ.ಆರ್.ಜೆಡ್ ಪ್ರದೇಶದಲ್ಲಿ ಮರಳನ್ನ ತೆಗೆದು ಮಾರಾಟ ಮಾಡುವಂತಿಲ್ಲ ಎನ್ನುವ ಆದೇಶವನ್ನ ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಕ್ಕೂ ಅಧಿಕ ಕಾಲದಿಂದ ಜಿಲ್ಲೆಯಲ್ಲಿ ಮರಳು ತೆಗೆಯುವ ಕಾರ್ಯಕ್ಕೆ ಜಿಲ್ಲಾಡಳಿತದಿಂದ ತಡೆ ಹಿಡಿಯಲಾಗಿದೆ. ಕರಾವಳಿ ಜಿಲ್ಲೆಯಾದ ಕಾರವಾರ, ಉಡುಪಿ ಹಾಗೂ ಮಂಗಳೂರಿನಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದ್ದು ಮೂರು ಜಿಲ್ಲೆಯಲ್ಲಿ ಮರಳಿನ ಅಭಾವ ಎದುರಾದ ಹಿನ್ನಲೆಯಲ್ಲಿ ಈ ಹಿಂದೆ ಇದ್ದ ಸರ್ಕಾರ ಮರಳುಗಾರಿಕೆಗೆ ಮತ್ತೆ ಅನುಮತಿ ಕೊಡುವ ಕುರಿತು ಚರ್ಚೆ ಮಾಡುವುದರಲ್ಲಿಯೇ ನಿರತವಾಗಿದ್ದು ಬಿಟ್ಟರೇ ಅನುಮತಿ ಮಾತ್ರ ಕೊಡುವಲ್ಲಿ ಯಶಸ್ವಿಯಾಗಿರಲಿಲ್ಲ. ಈಗಿನ ಸರ್ಕಾರ ಸಹ ಈಗ ಅನುಮತಿ ಕೊಡುತ್ತೇವೆ ಆಗ ಕೊಡುತ್ತೇವೆ ಎಂದು ಕಾಲವನ್ನ ದಬ್ಬುತ್ತಲೇ ಇದ್ದಾರೆ.
ಮರಳಿನ ಅಭಾವ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲೂ ಮರಳಿಗೆ ಬೇಡಿಕೆ ಇದ್ದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲ ಇಲಾಖೆ ಅಧಿಕಾರಿಗಳು ಈ ದಂದೆಯನ್ನೇ ಬಳಸಿಕೊಂಡು ಹಣ ಮಾಡುವಲ್ಲಿ ನಿರತರಾಗಿದ್ದಾರೆ. ಮರಳುಗಾರಿಕೆಗೆ ಅಧಿಕೃತವಾಗಿ ಇನ್ನೂ ಅನುಮತಿ ಕೊಡದೇ ಇದ್ದರೂ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಕೆಲಸದಲ್ಲಿ ಕೆಲವರು ಇದ್ದು ತಮ್ಮ ದಂದೆಗೆ ಯಾವುದೇ ಸಮಸ್ಯೆ ಮಾಡಬಾರದು ಎಂದು ಹಲವರಿಗೆ ಪ್ರತಿ ತಿಂಗಳು ಹಣ ನೀಡಿ ಸಾಗಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ತಿಂಗಳು ನೀಡುವ ಹಣದಲ್ಲಿ ಸಹ ಏರಿಕೆ ಕಂಡಿರುವುದರಿAದ ಮರಳನ್ನ ಖರೀದಿ ಮಾಡುವ ಜನರ ಮೇಲೂ ಈ ಹಣದ ಹೊರೆಯನ್ನ ಏರಿಸುವ ಕೆಲಸಕ್ಕೆ ಇಳಿದಿದ್ದಾರೆ.
ಮರಳು ಅನುಮತಿ ಇದ್ದ ವೇಳೆಯಲ್ಲಿ ಒಂದು ಲೋಡ್ ಮರಳಿಗೆ ಹತ್ತು ಸಾವಿರ ಆಸುಪಾಸಿನಲ್ಲಿ ಹಣವನ್ನ ಕೊಟ್ಟು ಖರೀದಿ ಮಾಡಲಾಗುತ್ತಿತ್ತು. ಆದರೆ ಈಗ ಲೋಡ್ ಗೆ 20 ಸಾವಿರ ರೂಪಾಯಿ ದಾಟುವಂತಾಗಿದೆ. ಕುಮಟಾ, ಹಾಗೂ ಹೊನ್ನಾವರದಿಂದ ಶಿರಸಿ ಭಾಗಕ್ಕೆ ಮರಳನ್ನ ತೆಗೆದುಕೊಂಡು ಹೋದರೆ ಲೋಡ್ ಗೆ 25 ರಿಂದ 30 ಸಾವಿರದ ವರೆಗೆ ಮಾರಾಟ ಮಾಡಲಾಗುತ್ತಿದ್ದು ಇನ್ನು ಅಂಕೋಲಾದಿAದ ಕಾರವಾರ ಭಾಗಕ್ಕೆ ಬಂದರೆ ಕನಿಷ್ಟ 20 ಸಾವಿರ ರೂಪಾಯಿ ಹಣವನ್ನ ಜನರಿಂದ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಿಗೆ ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರದಿಂದ ಅಕ್ರಮವಾಗಿಯೇ ಮರಳನ್ನ ತೆಗೆದು ಸಾಗಾಟ ಮಾಡಲಾಗುತ್ತಿದೆ. ಕಳೆದ ಎರಡು ಮೂರು ತಿಂಗಳನಲ್ಲಿಯೇ ಮರಳಿನ ಬೆಲೆ ದುಪ್ಪಟ್ಟು ಹೆಚ್ಚಾಗಿದ್ದು ಮನೆ ಕಟ್ಟುವವರು ಪರದಾಟ ಮಾಡಿಕೊಂಡು ಕದ್ದುಮುಚ್ಚಿ ಮರಳನ್ನ ದುಬಾರಿ ಬೆಲೆಗೆ ಖರೀದಿ ಮಾಡುವ ಪರಿಸ್ಥಿತಿ ಉದ್ಭವಿಸಿದೆ.
ಮರಳುಗಾರಿಕೆಗೆ ಅಧಿಕೃತವಾಗಿ ಅವಕಾಶ ಕೊಡಬೇಕು ಎನ್ನುವ ಚರ್ಚೆ ಪದೇ ಪದೇ ನಡೆಯುತ್ತಿದೆ. ಆದರೆ ಅಧಿಕೃತವಾಗಿ ಮರಳನ್ನ ತೆಗೆಯಲು ಅವಕಾಶ ಕೊಟ್ಟರೂ ಮರಳು ಮಾರಾಟ ಮಾಡಲು ಹಸಿರುಪೀಠದ ಆದೇಶ ಅಡ್ಡಿ ಇರುವುದರಿಂದ ಇನ್ನೂ ಯಾವ ನಿಲಯವಿಗೆ ಬರಲು ಜಿಲ್ಲಾಡಳಿತ ಮುಂದಾಗಿಲ್ಲ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಮರಳುಗಾರಿಕೆಗೆ ಜಿಲ್ಲೆಯಲ್ಲಿ ಅಧಿಕೃತವಾಗಿ ಇನ್ನೂ ಅವಕಾಶ ಮಾಡಿಕೊಡದೇ ಇದ್ದರೇ ಅಕ್ರಮವಾಗಿ ಮರಳನ್ನ ತೆಗೆದು ಮಾರಾಟ ಮಾಡುವವರು ತಮ್ಮ ದಂದೆಗೆ ಸಮಸ್ಯೆಯಾಗಬಾರದು ಎಂದು ಎಲ್ಲರಿಗೂ ಹಣ ನೀಡಿ ಐವತ್ತು ಸಾವಿರಕ್ಕೆ ಲೋಡ್ ಮರಳನ್ನ ಮಾರಾಟ ಮಾಡಿದರು ಆಶ್ಚರ್ಯ ಪಡುವ ಅಗತ್ಯವಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿಯೇ ಕೇಳಿ ಬಂದಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ಅಧಿಕೃತವಾಗಿ ಮರಳುಗಾರಿಕೆಗೆ ಅವಕಾಶ ಶೀಘ್ರದಲ್ಲೇ ಮಾಡಿಸಿಕೊಡುವ ಕೆಲಸ ಮಾಡಬೇಕಾಗಿದೆ.
ಹಲವರ ಹೆಸರಿನಲ್ಲಿಯೂ ಹಣ ಸಂಗ್ರಹ;
ಸದ್ಯ ಮರಳುಗಾರಿಕೆಗೆ ಅಧಿಕೃತವಾಗಿ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಕದ್ದುಮುಚ್ಚಿ ಮರಳನ್ನ ತೆಗೆದು ಸಾಗಾಟ ಮಾಡಲಾಗುತ್ತಿದ್ದು ಇನ್ನು ಈ ಅಕ್ರಮ ಚಟುವಟಿಕೆಯ ಬಗ್ಗೆ ಧ್ವನಿ ಎತ್ತದಂತೆ ಹಲವರ ಹೆಸರಿನಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಅಕ್ರಮ ಮರಳುಗಾರಿಕೆಗೆ ಅಡ್ಡಿ ಬರದಂತೆ ಕೆಲ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂಧಿಗಳಿಗೆ, ಜನಪ್ರತಿನಿಧಿ ಹೆಸರಿನಲ್ಲಿ ಕೆಲವರಿಗೆ, ಪತ್ರಕರ್ತರ ಹೆಸರಿನಲ್ಲಿ ಕೆಲವರಿಗೆ, ಆರ್.ಟಿಐ ಕಾರ್ಯಕರ್ತರ ಹೆಸರಿನಲ್ಲಿ ಕೆಲವರಿಗೆ ಹಣ ಕೊಡಲೆಂದು ಸಂಗ್ರಹ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ. ಇನ್ನು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಅಕ್ರಮ ಮರಳುಗಾರಿಕೆಗೆ ಸಿಂಹ ಸ್ವಪ್ನವಾಗಿದ್ದು ಕೆಲ ದಂದೆಕೋರರಿಗೆ ಇದು ನುಂಗಲಾರದ ತುತ್ತಾಗಿದೆ.