ಕಾರವಾರ: ಪರೀಕ್ಷೆಗೆ ಹೋಗಲು ಸಿದ್ದರಾಗಿದ್ದ ವಿದ್ಯಾರ್ಥಿಗಳನ್ನು ಬಸ್ ಪೂರ್ಣವಿದೆ ಎಂದು ಹತ್ತಿಸಿಕೊಳ್ಳದ ಹಿನ್ನಲೆಯಲ್ಲಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಗರದ ಅಜ್ವಿ ಹೋಟೆಲ್ ಬಳಿ ನಡೆದಿದೆ.
ತಾಲೂಕಿನ ಮಾಜಾಳಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಪರೀಕ್ಷೆಗೆ ತೆರಳಲು ಅಜ್ವಿ ಹೋಟೆಲ್ ಬಳಿ ಹಾಸ್ಟೆಲ್ನಿಂದ ವಿದ್ಯಾರ್ಥಿಗಳು ಆಗಮಿಸಿ, ಬಸ್ಸನ್ನು ಹತ್ತಲು ಮುಂದಾದಾಗ ಬಸ್ಸು ಸಂಪೂರ್ಣ ಭರ್ತಿಯಾಗಿದ್ದು ಯಾವುದೇ ಕಾರಣಕ್ಕೂ ಹತ್ತಿಸಿಕೊಳ್ಳುವುದಿಲ್ಲ ಎಂದು ನಿರ್ವಾಹಕ ತಿಳಿಸಿದ್ದ. ಶಕ್ತಿ ಯೋಜನೆ ಹಿನ್ನಲೆಯಲ್ಲಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೇ ತುಂಬಿಕೊಂಡಿದ್ದು ಬೇರೆ ವಿದ್ಯಾರ್ಥಿಗಳು ಹತ್ತದ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಮಗೆ ಪರೀಕ್ಷೆ ಇದ್ದು ಇದೇ ಬಸ್ಸಿನಲ್ಲಿ ತೆರಳಿದರೆ ಮಾತ್ರ ಪರೀಕ್ಷೆ ಬರೆಯಲು ಸಮಯ ಆಗಲಿದ್ದು ತಮಗೆ ಹೇಗಾದರು ಮಾಡಿ ಬಸ್ಸಿನಲ್ಲಿ ಕರೆದುಕೊಂಡು ಹೋಗುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು ಇದಕ್ಕೆ ನಿರ್ವಾಹಕ ಒಪ್ಪಲಿಲ್ಲ. ನಗರದ ಕೂರ್ಸಾವಾಡದಲ್ಲಿನ ಬಿಸಿಎಂ ಹಾಸ್ಟೆಲ್ನಿಂದ ಬಂದು ಸರ್ಕಾರಿ ಬಸ್ಸನ್ನ ಪ್ರತಿದಿನ ಹತ್ತಿಕೊಂಡು ಇಂಜಿನಿಯರಿಂಗ್ ಕಾಲೇಜಿಗೆ ತೆರಳಬೇಕು. ಆದರೆ ಕಾಲೇಜಿಗೆ ತೆರಳಲು ಬಸ್ಸಿನ ವ್ಯವಸ್ಥೆ ಸರಿಯಿಲ್ಲ. ಬರುವ ಬಸ್ಸು ಭರ್ತಿ ಎಂದು ಪದೇ ಪದೇ ನಮ್ಮನ್ನ ಬಿಟ್ಟು ಹೋಗುತ್ತಿದ್ದು ಪರೀಕ್ಷೆ ಸಮಯದಲ್ಲೂ ಬಿಟ್ಟು ಹೋದರೆ ನಮ್ಮ ಜೀವನದ ಮೇಲೆ ಪರಿಣಾಮ ಬೀಳುತ್ತದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.
ಇನ್ನು ಬಸ್ಸನ್ನ ಹಲವು ಸಮಯ ತಡೆಗೆ ಪ್ರತಿಭಟಿಸಿ ತಮಗೆ ಬೇರೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಇದಾದ ನಂತರ ಬಸ್ಸಿನಲ್ಲಿ ನಗರದ ದಿವೇಕರ್ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರು ಇಳಿದು ಮಾಜಾಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಬಸ್ಸಿನಲ್ಲಿ ಹೋಗಲು ಅವಕಾಶ ಮಾಡಿಕೊಟ್ಟ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದು ಪರೀಕ್ಷೆ ಬರೆಯಲು ತೆರಳಿದರು.