ಶಿರಸಿ: ಅ. 8 ರಂದು ರವಿವಾರ ಮುಂಜಾನೆ 9.30 ರಿಂದ ಮಧ್ಯಾಹ್ನ 3.30 ವರೆಗೆ ಇಲ್ಲಿನ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿಯ ಸಂಯೋಜನೆಯಲ್ಲಿ ‘ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಜರುಗಲಿದೆ.
ಕಲಾವಿದರೂ, ಸಾಹಿತಿಗಳೂ ಆದ ಡಾ.ಜಿ.ಎ.ಹೆಗಡೆ ಸೋಂದಾ ಅಧ್ಯಕ್ಷತೆ ವಹಿಸುವರು. ಖ್ಯಾತ ಸಾಹಿತ್ಯ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಸಮಾರಂಭ ಉದ್ಘಾಟಿಸುವರು. ಸ್ಕೊಡ್ವೆಸ್ ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸ್ಕೃತ ಉಪನ್ಯಾಸಕ ರಾಘವೇಂದ್ರರಾವ್ ಉಡುಪಿ, ಶಿರಸಿ ತಾಲೂಕಾ ಕಸಾಪ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಹಿರಿಯ ಸಾಹಿತಿ ಡಿ.ಎಸ್.ನಾಯ್ಕ, ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕ ಎಸ್.ಎಸ್.ಭಟ್, ಸಾಹಿತಿಗಳಾದ ಅರವಿಂದ ಭಟ್ (ಘಾನಾ), ಹಿರಿಯ ಬರಹಗಾರ ಅನಂತಕೃಷ್ಣ, ಕವಯಿತ್ರಿ ದಾಕ್ಷಾಯಿಣಿ ಪಿ.ಸಿ ವೇದಿಕೆಯ ಮೇಲೆ ಉಪಸ್ಥಿತರಿರುವರು.
ನಂತರ ಇದೇ ವೇದಿಕೆಯಲ್ಲಿ ಹಿರಿಯ ಸಾಹಿತಿ ಎಸ್.ಎಸ್.ಭಟ್ ರವರ ‘ಬದುಕ ಬಯಲಲ್ಲಿ’ ಕೃತಿಯನ್ನು ಜಗದೀಶ ಭಂಡಾರಿಯವರು ಲೋಕಾರ್ಪಣೆಗೊಳಿಸುವರು. ಕಥೆಗಾರ ಸೀತಾರಾಮ ಕಾನಳ್ಳಿ ಕೃತಿ ಪರಿಚಯಿಸುವರು. ಬಳಿಕ ನಡೆವ ಹನಿಗಥೆ, ಹನಿಗವನ ಗೋಷ್ಠಿಯ ಅಧ್ಯಕ್ಷತೆಯನ್ನು ಕವಿಗಳೂ, ಶಿಕ್ಷಕರೂ ಆದ ರಮೇಶ ಕೆರೆಕೋಣ ವಹಿಸುವರು. ಭೋಜನ ವಿರಾಮದ ಬಳಿಕ ನಡೆವ “ಧರ್ಮಾಂಗದ ದಿಗ್ವಿಜಯ” ಎಂಬ ತಾಳಮದ್ದಲೆಯ ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮದ್ದಳೆ ವಾದಕರಾಗಿ ಕೃಷ್ಣ ಹೆಗಡೆ ಜೋಗದ ಮನೆ, ಅರ್ಥಧಾರಿಗಳಾಗಿ ಭರತನ ಪಾತ್ರದಲ್ಲಿ ದಾಕ್ಷಾಯಿಣಿ.ಪಿ.ಸಿ, ಧರ್ಮಾಂಗದನಾಗಿ ರೋಹಿಣಿ ಹೆಗಡೆ ಮತ್ತು ನಾರದನಾಗಿ ಸುಭ್ರಾಯ ಹೆಗಡೆ ಕೆರೆಕೊಪ್ಪ ಭಾಗವಹಿಸುವರು.
ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಭಾಗ್ವತ ಮತ್ತು ಯಕ್ವಗಾನ ಚಂಡೆವಾದಕ ಪ್ರಸನ್ನ ಹೆಗ್ಗಾರರವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ನಾರಾಯಣ ಭಾಗ್ವತ ನಿರ್ದೇಶನದಲ್ಲಿ ಮಾರಿಕಾಂಬಾ ಪ್ರೌಢಶಾಲಾ ಮಕ್ಕಳಿಂದ ‘ಒಂದು ಲಸಿಕೆಯ ಕಥೆ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಆರಂಭದಲ್ಲಿ ಕವಯಿತ್ರಿ ಸುಜಾತಾ ದಂಟಕಲ್ ನಿರೂಪಿಸುವರು. ಪ್ರಾರ್ಥನೆಯನ್ನು ರಾಜಲಕ್ಷ್ಮಿ ಭಟ್ಟ ಮತ್ತು ರೇಣುಕಾ ಬ್ಯಾಗದ್ದೆ ಸಂಗಡಿಗರು ಪ್ರಸ್ತುತಪಡಿಸುವರು. ಚುಟುಕು ಕವಿ ದತ್ತಗುರು ಕಂಠಿ ಸ್ವಾಗತಿಸುವರು. ಎಸ್ ಎಸ್ ಭಟ್ ಪ್ರಾಸ್ತಾವಿಕ ಮಾತನ್ನಾಡುವರು. ಕವಯಿತ್ರಿ ಯಶಸ್ನಿಮೂರ್ತಿ, ರೇವತಿ ಭಟ್ಟ, ಶೋಭಾ ಭಟ್ಟ, ಕಥೆಗಾರ ಕೆ.ಮಹೇಶ, ಕೆ.ಎಸ್.ಅಗ್ನಿಹೋತ್ರಿ ಮತ್ತು ಮಹೇಶ ಹೆಗಡೆ ಸಿದ್ದಾಪುರ ಸಹಕರಿಸುವರು. ಕೊನೆಯಲ್ಲಿ ದಿವಸ್ಪತಿ ಭಟ್ಟ ವಂದಿಸುವರು. ಈ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.