Slide
Slide
Slide
previous arrow
next arrow

ಮೆಡಿಕಲ್ ಸೌಲಭ್ಯಕ್ಕಾಗಿ ಆಗ್ರಹಿಸಿ ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆ ಸಂಕಲ್ಪ: ಅನಂತಮೂರ್ತಿ ಹೆಗಡೆ

300x250 AD

ಶಿರಸಿ : ಉತ್ತರ ಕನ್ನಡದ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೈಟೆಕ್ ಮೆಡಿಕಲ್ ಸೌಲಭ್ಯಗಳಿವೆ. ಆದರೆ, ಇಲ್ಲಿ ಮಾತ್ರ ಒಂದು ಅವಘಡ ಆದರೂ ಜೀವ ಉಳಿಸಿಕೊಳ್ಳಲು ಕನಿಷ್ಠ 1೦೦ ಕಿಲೋಮೀಟರ್ ಪ್ರಯಾಣಿಸಬೇಕಾದ ಅನಿವಾರ‍್ಯತೆ ಇದೆ. ಈ ಜ್ವಲಂತ ಸಮಸ್ಯೆ ನೀಗಿಸಲು, ಸರಕಾರದ ಕಣ್ಣು ತೆರೆಸಲು ಅಕ್ಟೋಬರ್ 6ರಿಂದ 13ರ ತನಕ ಶಿರಸಿಯಿಂದ ಕಾರವಾರದ ತನಕ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಪ್ರಕಟಿಸಿದರು.

ಅವರು ಸುದ್ದಿಗೋಷ್ಠಿ ನಡೆಸಿ, ಶಿರೂರಿನಲ್ಲಿ ನಡೆದ ದುರಂತದ ಬಳಿಕ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಕ್ಕೊತ್ತಾಯದ ಹೋರಾಟಗಳು ನಡೆದವು. ಆದರೆ, ಪ್ರಯೋಜನ ಆಗಲಿಲ್ಲ. ಟ್ರಾಮಾ ಸೆಂಟರ್, ಕುಮಟಾದಲ್ಲಿ ಹೈಟೆಕ್ ಮೆಡಿಕಲ್ ಆಸ್ಪತ್ರೆಗೆ ಸ್ಥಳ ನೋಡಿದರೂ ರಾಜ್ಯ ಸರಕಾರ ಮುಂದುವರಿದಿಲ್ಲ. ಜನರ ಸಮಸ್ಯೆ ಮಾತ್ರ ನೀಗಿಲ್ಲ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಹೃದಯ ಕಾಯಿಲೆ ಸೇರಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗೂ ಇಲ್ಲಿ ಸ್ಪಂದನೆ ಸಿಗದು. ತುರ್ತು ಚಿಕಿತ್ಸೆ ಮಾಡಿದರೂ ಮುಂದಿನ ಪ್ರಯಾಣ ಅನಿವಾರ‍್ಯವಾಗಿದೆ. ಜಿಲ್ಲೆಯಿಂದ ಎರಡ್ಮೂರು ಬಸ್ಸುಗಳ ಮೂಲಕ ಮಣಿಪಾಲ, ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವದು ಅನಿವಾರ‍್ಯವಾಗಿದೆ ಎಂದರು.

ಸ್ವಾತಂತ್ರ್ಯ ಬಂದು 76 ವರ್ಷ ಆದರೂ ಮೂಲಭೂತವಾಗಿ ಬೇಕಾದ ಆರೋಗ್ಯ ಸುರಕ್ಷತೆ ಜಿಲ್ಲೆಯಲ್ಲಿ ಇಲ್ಲ. ಕಾರವಾರದಲ್ಲಿ ಒಂದು ಮೆಡಿಕಲ್ ಕಾಲೇಜು ಇದ್ದರೂ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಉಡುಪಿ, ಶಿವಮೊಗ್ಗಕ್ಕೆ ಹೋದಷ್ಟೇ ದೂರವಾಗುತ್ತದೆ. ಅಲ್ಲಿನ ಸರಕಾರಿ ಮೆಡಿಕಲ್ ಕಾಲೇಜಿಗೂ ಬೇಕಾದ ಸೌಲಭ್ಯ ಸರಕಾರ ನೀಡಿಲ್ಲ. ಪೂರ್ಣ ಪ್ರಮಾಣದ ಟ್ರಾಮಾ ಸೆಂಟರ್ ಸೇರಿದಂತೆ ಆಧುನಿಕ ಸೌಲಭ್ಯದ ಮೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆ ಜಿಲ್ಲೆಗೆ ಬೇಕಾಗಿದೆ. ರಾಜ್ಯದ ದೊಡ್ಡ ಜಿಲ್ಲೆಗಳ ಸಾಲಿನಲ್ಲಿ ಇರುವ ಉತ್ತರ ಕನ್ನಡದಲ್ಲಿ ಆರೋಗ್ಯ ಸುರಕ್ಷತೆಗೆ ಹಾಗೂ ಜನರ ಜೀವ, ಜೀವನದ ರಕ್ಷಣೆಗೆ ಆರೋಗ್ಯ ಭಾಗ್ಯ ಕೊಡಲೇಬೇಕಾಗಿದೆ. ಆದರೆ, ಇಚ್ಛಾ ಶಕ್ತಿ ಕೊರತೆಯಿಂದ ಅದು ಈಡೇರಿಲ್ಲ ಎಂದರು.

ಆಸ್ಪತ್ರೆ ಇದ್ದರೆ ವೈದ್ಯರು ಬಂದೇ ಬರುತ್ತಾರೆ ಎಂದಿಲ್ಲ. ಆ ಕೊರತೆ ಕೂಡ ನೀಗಿಸಲು ಮೆಡಿಕಲ್ ಕಾಲೇಜ್ ಒಂದೇ ಪರಿಹಾರ. ಜಿಲ್ಲೆಯಲ್ಲಿ ಹಲವಾರು ಅಣೇಕಟ್ಟಿದೆ. ಒಂದು ಕೈಗಾ ಇದೆ. ದೇಶಕ್ಕೆ, ರಾಜ್ಯಕ್ಕೆ ತನ್ನದೇ ಆದ ಕೊಡುಗೆ ಅರಣ್ಯದಿಂದಲೂ, ತ್ಯಾಗದಿಂದಲೂ ನೀಡಿದೆ. ಈವರೆಗೆ ಬೇರಾವ ದೊಡ್ಡ ಬೇಡಿಕೆ ಜನರು ಕೇಳಿಲ್ಲ. ಕೇಳಿದ ಮೆಡಿಕಲ್ ಕಾಲೇಜು ಕೊಟ್ಟು ದೊಡ್ಡ ಜಿಲ್ಲೆಯ ಪ್ರಾದೇಶಿಕ ಅಸಮತೋಲನ ಸರಿತೂಗಿಸುವ ಪ್ರಯತ್ನ ಕೂಡ ಮಾಡದೇ ಇರುವದು ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯವಾಗಿದೆ. ಶಿರಸಿ ಹಾಗೂ ಕುಮಟಾಕ್ಕೆ ಎರಡು ನೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆ ಬೇಕಾದ ಬೇಡಿಕೆಯಾಗಿದೆ ಎಂದರು.

ಪಾದಯಾತ್ರೆ ಒಂದು ರಾಜಕೀಯ ಉದ್ದೇಶವಿಲ್ಲ. ಜನರ ನೋವಿಗೆ ಧ್ವನಿಯಾಗುವ ಉದ್ದೇಶವಿಷ್ಟೇ. ಈ ಅಭಿಯಾನದಲ್ಲಿ ಎಲ್ಲರೂ ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು. ಸಂಯೋಜನೆ ಮಾತ್ರ ನಾವು ಮಾಡುತ್ತಿದ್ದೇವೆ. ಶಿರಸಿಯಲ್ಲಿ ಅಕ್ಟೋಬರ್ 6ಕ್ಕೆ ಪಾದಯಾತ್ರೆಯನ್ನು ದಕ್ಷಿಣ ಭಾರತದ ಶಕ್ತಿ ದೇವತೆ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಆರಂಭಿಸುತ್ತೇವೆ. ಅಲ್ಲಿಂದ ನಿತ್ಯ 15-25 ಕಿಲೋಮೀಟರ್ ನಡೆದು ಕಾರವಾರ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ.

ಮೆಡಿಕಲ್ ಕಾಲೇಜು ಕೊಡಿ, ಜೀವ ದಾನ ಮಾಡಿ ಎಂಬ ಘೋಷಣೆಯೊಂದಿಗೆ ಈ ಪಾದಯಾತ್ರೆ ನಡೆಯಲಿದ್ದು, ಒಟ್ಟೂ 8 ದಿನಗಳ ಕಾಲ ನಡೆಯಲಿದೆ. ಸ್ಥಳೀಯವಾಗಿ ಜಾಗೃತಿ ಜಾಥಾ ಕೂಡ ಮಾಡುತ್ತ, ಸಾಧ್ಯವಾದರೆ ಬೀದಿ ನಾಟಕ, ಹಾಡುಗಳ ಮೂಲಕವೂ ಜಾಗೃತಿ ಕಾರ್ಯ ಮಾಡಲು ಯೋಜಿಸಲಾಗಿದೆ. ಜನರ ಸಹಕಾರ, ಸಹಭಾಗಿತ್ವದಿಂದ ಮಾತ್ರ ಯಶಸ್ವಿಯಾಗಲಿದೆ.

300x250 AD

ನಾನು ಇಷ್ಟು ವರ್ಷ ಜೀವನದಲ್ಲಿ ನನಗಾಗಿ ,ನನ್ನ ಕುಟುಂಬ ಕ್ಕಾಗಿ ಕಷ್ಟ ಪಟ್ಟಿದ್ದೇನೆ, ಇನ್ನುಮೇಲೆ ನನ್ನ ಜೀವನವನ್ನ ಈ ನನ್ನ ಊರಿಗಾಗಿ ಮೀಸಲಾಗಿ ಇಡುತ್ತೇನೆ. ಮೆಡಿಕಲ್ ಕಾಲೇಜು – ಆಸ್ಪತ್ರೆ ಆಗೋವರೆಗೂ ಸುಮ್ಮನೆ ಕೂರುವ ಮಾತೇ ಇಲ್ಲ ಇನ್ನು ನಾವು ಸುಮ್ಮನೆ ಕೂತರೆ ನಮ್ಮ ಮಕ್ಕಳ ಮುಂದಿನ ಕತೆ ಏನು? ನಮ್ಮ ಭಾಗದ ಕುಟುಂಬದಲ್ಲಿ ಮಕ್ಕಳು ಬೆಂಗಳೂರು ಅಥವಾ ವಿದೇಶದಲ್ಲಿ ಇದ್ದರೆ , ಮನೆಯಲ್ಲಿ ವಯಸ್ಸಾದವರು ಮಾತ್ರ , ಒಳ್ಳೆ ಆಸ್ಪತ್ರೆ ಅತ್ಯಗತ್ಯ ನಮ್ಮ ತಂದೆ ತಾಯಿಗಳಿಗೆ ತಕ್ಷಣ ಏನಾದರೂ ಆದರೆ ಎಲ್ಲಿ ಹೋಗಬೇಕು? ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.

ಒಂದು ದಿನ ಆದರೆ ಒಂದು ದಿನ ನಮ್ಮ ಜೊತೆ ಪಾದಯಾತ್ರೆ ಮಾಡಬಹುದು, ನೀವೆಲ್ಲರೂ ನಿಮ್ಮ ಊರಿನ ಜನರ ಸಹಿಹಾಕಿಸಿ ಮನವಿ ಪತ್ರ ಕೊಟ್ಟರೆ ನಾನು ನನ್ನ ಪತ್ರದ ಜೊತೆ ನಿಮ್ಮ ಪತ್ರವನ್ನು. ಸರಕಾರಕ್ಕೆ ತಲುಪಿಸುತ್ತೇನೆ.

ನಮ್ಮ ಊರಿನ ಎಲ್ಲಾ ಸಾಮಾಜಿಕ ಸಂಘಟನೆ ಯವರಲ್ಲಿ ನನಗೆ ಬೆಂಬಲ ಕೊಡಿ ಎಂಬುದಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶಿರಸಿಯಲ್ಲಿ ಹಾಗೂ ಜಿಲ್ಲೆಯ ಮಧ್ಯವರ್ತಿ ಸ್ಥಳ ಕುಮಟಾದಲ್ಲಿ ಎರಡು ಕಡೆ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ನಮ್ಮದು. ಜನರ ಹಿತದ ದೃಷ್ಟಿಯಲ್ಲಿ ಭೌಗೋಳಿಕ ವಿಸ್ತಾರದ ಕಾರಣಕ್ಕೂ ಇವೆರಡೂ ಕಡೆ ಅನಿವಾರ‍್ಯವಾಗಿ ಬೇಕು. ದಕ್ಷಿಣ ಕನ್ನಡದ ಒಂದೇ ಗ್ರಾಮ ಪಂಚಾಯ್ತಿಯಲ್ಲಿ ಎರಡು ಮೆಡಿಕಲ್ ಕಾಲೇಜಿವೆ. ಯಶಸ್ವಿಯಾಗಿ ನಡೆಯುತ್ತಿವೆ. ನಮ್ಮಲ್ಲಿ ಜಿಲ್ಲೆಯ ವಿಸ್ತಾರದ ಕಾರಣದಿಂದ ಇನ್ನೆರಡು ಬೇಕು ಎಂದು ಆಗ್ರಹಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅನಂತ ಮೂರ್ತಿ ಹೆಗಡೆ –Tel:+919448317709, ಸಂತೋಷ್ ನಾಯ್ಕ Tel:+919449995439 ಸಂಪರ್ಕ ಮಾಡಬಹುದಾಗಿದೆ ಎಂದರು.

Share This
300x250 AD
300x250 AD
300x250 AD
Back to top