ಹಳಿಯಾಳ: ಮುನ್ಸಿಪಲ್ ಆ್ಯಕ್ಟ್ ತಿಳಿದ ಭಾಷೆಯಲ್ಲಿ ಪ್ರತಿಯೊಬ್ಬ ಸದಸ್ಯರೂ ಅರಿತುಕೊಂಡಿರುವುದು ಅನಿವಾರ್ಯ. ಕಾನೂನಿನ ಅರಿವಿಲ್ಲದೇ ಮನಸೋ ಇಚ್ಛೆ ನಡೆದುಕೊಳ್ಳಲು ಅಥವಾ ಕಾನೂನಿನ ಚೌಕಟ್ಟುಗಳನ್ನು ಮೀರಿ ವರ್ತಿಸಿದ್ದೇ ಆದಲ್ಲಿ ಸದಸ್ಯತ್ವವನ್ನೇ ರದ್ದುಪಡಿಸುವ ಅವಕಾಶವೂ ಇದೆ ಎಂದು ಇಲ್ಲಿನ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಎಚ್ಚರಿಕೆ ನೀಡಿದರು.
ಪುರಸಭೆಯ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರಿ ನೌಕರರ ಸಾಲಿನಲ್ಲಿ ಪರಿಗಣಿಸಲ್ಪಡುವ ಪುರಸಭೆಯ ಚುನಾಯಿತ ಸದಸ್ಯರು ಸರಕಾರಿ ನಡಾವಳಿಗಳು ಮತ್ತು ನೀತಿ ನಿಯಮಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು. ಹಾಗೇನಾದರೂ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಯಾವುದೇ ಪೂರ್ವಭಾವಿ ಸೂಚನೆ ನೀಡದೇ ಮೂರು ತಾಸುಗಳಲ್ಲೇ ಸಭೆ ಕರೆಯುವ ಹಕ್ಕು ಮತ್ತು ಬಾಧ್ಯತೆ ಆಡಳಿತಾಧಿಕಾರಿಗೆ ಇದ್ದು, ಉಲ್ಲಂಘನೆಗೆ ತಕ್ಕ ಶಿಸ್ತುಕ್ರಮ ಜರುಗಿಸುವ ಅಧಿಕಾರ ಇದೆ ಎಂಬುದನ್ನು ಸದಸ್ಯರು ಕೂಡ ಗಮನದಲ್ಲಿಟ್ಟುಕೊಂಡಿರಬೇಕು ಎಂದರು.
ಆಡಳಿತಾಧಿಕಾರಿ ಕರೆದಿದ್ದ ಸಭೆ ಮುಂದೂಡಿದ್ದ ಸದಸ್ಯರು: ಸೆ.27ರಂದು ಕರೆದಿದ್ದ ಪುರಸಭೆಯ ವಿಶೇಷ ಸಭೆಗೆ ಆಡಳಿತಾಧಿಕಾರಿಯು ತಡವಾಗಿ ಬಂದರೆಂಬ ಕಾರಣಕ್ಕೆ ಸದಸ್ಯರುಗಳೇ ಸಭೆಯನ್ನು 30ಕ್ಕೆ ಮುಂದೂಡಿ ರದ್ದುಪಡಿಸಿದ್ದರು.ಇದರಿಂದಾಗಿ ರಾಯಕೋಡ್ ಅಸಮಾಧಾನಗೊಂಡಿದ್ದರು. ಆದರೆ ಶನಿವಾರದ ಸಭೆಯು ಯಾವುದೇ ರೀತಿಯ ಹೆಚ್ಚಿನ ಗೊಂದಲಗಳಿಲ್ಲದೇ, ಮಂಡಿಸಿದ 8 ವಿಷಯಗಳಿಗೂ ಚರ್ಚೆ ನಡೆದು ಅನುಮೋದನೆಗೊಂಡಿತು.
ಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಸಾಳೇನವರ, ಸದಸ್ಯರುಗಳಾದ ಅಜರ ಬಸರಿಕಟ್ಟಿ, ಶಂಕರ ಬೆಳಗಾಂವಕರ, ಉದಯ ಹೂಲಿ, ಸುರೇಶ ತಳವಾರ, ಸಂತೋಷ ಘಟಕಾಂಬಳೆ, ಸುವರ್ಣ ಮಾದರ, ರಾಜೇಶ್ವರಿ ಹಿರೇಮಠ, ಅನಿಲ ಬೆಳಗಾಂವಕರ, ಚಂದ್ರಕಾಂತ ಕಮ್ಮಾರ, ಸಂಗೀತಾ ಜಾಧವ, ರೂಪಾ ಗಿರಿ, ಪ್ರಭಾಕರ ಗಜಾಕೋಶ ಮತ್ತಿತರ ಸದಸ್ಯರುಗಳು ಹಾಜರಿದ್ದರು.