ಯಲ್ಲಾಪುರ: ಇಲ್ಲಿನ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ಸದಸ್ಯರ ಹಿತ ರಕ್ಷಿಸಿ, ಅವರ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿದೆ. ಅಲ್ಲದೇ ಆಪತ್ತು ಠೇವು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ ಜನಪರ ಆಡಳಿತ ನೀಡುತ್ತಿದೆ ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಹೇಳಿದರು.
ತಾಲೂಕಿನ ಹುಲ್ಲೋರಮನೆಯ ಗಜಾನನ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಸಂಘದ 74ನೆಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಗಳೂರಿನ ನಿಟ್ಟೆ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ನಮ್ಮ ಸಂಘ, ಸಂಘದ ಸದಸ್ಯರಿಗೆ ಆರೋಗ್ಯ ಕಾರ್ಡ ನೀಡುತ್ತಿದ್ದೇವೆ. ಇದನ್ನು ಅನಾರೋಗ್ಯ ಪೀಡಿತರು ಬಳಸಿಕೊಂಡರೆ ನಿಟ್ಟೆ ಆಸ್ಪತ್ರೆಯಲ್ಲಿ ಶೇ.10-15ರಷ್ಟು ಚಿಕಿತ್ಸಾ ವೆಚ್ಚ ಕಡಿಮೆಯಾಗುತ್ತದೆ ಎಂದರು.
ಅಲ್ಲದೇ ಎಲೆ ಚುಕ್ಕೆ ರೋಗದ ಸಮಸ್ಯೆ ಪರಿಹಾರದ ಕುರಿತು ತಜ್ಞರಿಂದ ಶಿಬಿರ ಮತ್ತಿತರ ಸೌಲಭ್ಯಗಳನ್ನು ಸಂಘ ಕಲ್ಪಿಸಿಕೊಡಲಿದೆ. ಭವಿಷ್ಯದಲ್ಲಿ ಸಂಘವು ಸಿಲೆಂಡರ್ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಪಂಪ್ ಸೇರಿದಂತೆ ವಿವಿಧ ವಿಭಾಗಗಳನ್ನು ತೆರೆಯುವ ವಿಚಾರ ಹೊಂದಿದೆ ಎಂದ ಅವರು, ಸದಸ್ಯರ ಬೆಂಬಲದಿAದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ನಮ್ಮ ಸಂಘದ ಮೂಲಕವೇ ಮಾರಾಟ ಮಾಡಬೇಕೆಂದು ವಿನಂತಿಸಿದರು.
ಕೆಲವು ಜನ ಸಂಘದ ಸದಸ್ಯತ್ವ ಪಡೆದು, ಸಂಘದ ವಿರುದ್ಧವೇ ಆಪಾದನೆ ಮತ್ತು ದೂರು ನೀಡುತ್ತಿದ್ದಾರೆ. ಅವರ ಸದಸ್ಯತ್ವವನ್ನು ರದ್ದು ಮಾಡುವಂತೆ ಸುಬ್ರಾಯ ಭಟ್ಟ ದಾನ್ಯಾನಕೊಪ್ಪ ಆಗ್ರಹಿಸಿದರು. ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಜಿ.ವಿ.ಭಟ್ಟ, ಗಜಾನನ ಭಟ್ಟ ಜಡ್ಡಿ, ಮತ್ತಿತರರು ಪ್ರಶ್ನೋತ್ತರ ವೇಳೆಯಲ್ಲಿ ಉಪಸ್ಥಿತರಿದ್ದರು.