ಕುಮಟಾ: ತಾಲೂಕಿನ ದೀವಗಿಯ ಹರಕಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಕುಸಿದಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಪಡುವಂತಾಗಿದೆ.
ತಾಲೂಕಿನ ದೀವಗಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಕಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಗುಡ್ಡವು ಮಳೆಯ ತೀವ್ರತೆಗೆ ಕುಸಿದಿದೆ. ಗುಡ್ಡ ಕುಸಿತದಿಂದ ಉಂಟಾದ ಮಣ್ಣು ಮತ್ತು ಬಂಡೆಗಲ್ಲುಗಳು ಶಾಲೆಯ ಸಮೀಪದ ವರೆಗೆ ಬಂದು ಬಿದ್ದಿದೆ. ಮಳೆಯ ಆರ್ಭಟ ಜಾಸ್ತಿಯಾಗಿ ಮತ್ತೇನಾದರೂ ಗುಡ್ಡ ಕುಸಿದರೆ, ಶಾಲೆಯ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಅಧಿಕವಾಗಿದೆ. ಅತ್ಯಧಿಕ ಹಾಲಕ್ಕಿ ಸಮುದಾಯದ ಬಡ ಕುಟುಂಬದ ಮಕ್ಕಳಿರುವ ಈ ಸರ್ಕಾರಿ ಶಾಲೆಯಲ್ಲಿ 42 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವೇಳೆ ಗುಡ್ಡ ಕುಸಿತದ ಅಪಾಯ ಎದುರಾಗಿ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ ಎಂಬುದು ಪಾಲಕರ ಪ್ರಶ್ನೆಯಾಗಿದೆ.
ಹಾಗಾಗಿ ಗುಡ್ಡ ಕುಸಿಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಮತ್ತು ದೀವಗಿ ಗ್ರಾಮ ಪಂಚಾಯತ್ ಮುಂದಾಗಬೇಕು. ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ತುರ್ತಾಗಿ ಸ್ಪಂದಿಸಬೇಕು. ಒಂದು ವೇಳೆ ಏನಾದರೂ ಅಪಾಯ ಎದುರಾದರೆ ಅದಕ್ಕೆ ಸ್ಥಳೀಯ ಆಡಳಿತ ವ್ಯವಸ್ಥೆಯ ಹೊಣೆಯಾಗಬೇಕಾಗುತ್ತದೆ ಎಂದು ಎಸ್ ಡಿಎಂಸಿ ಅಧ್ಯಕ್ಷ ಶ್ರೀಧರ ವೆಂಕಟಿ ಗೌಡ, ಉಪಾಧ್ಯಕ್ಷೆ ಕುಸುಮಾ ಗೌಡ, ಸದಸ್ಯರು, ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ದೀವಗಿ ಗ್ರಾಪಂ ಸದಸ್ಯರಾದ ಫ್ರ್ಯಾಂಕಿ ಫರ್ನಾಂಡಿಸ್, ಶ್ರೀಧರ ಜಟ್ಟು ಗೌಡ, ಮಂಜುಳಾ, ತಹಸೀಲ್ದಾರ್ ಸತೀಶ್ ಗೌಡ , ತಾಪಂ ಇಒ ನಾಗರತ್ನ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಕುಮಟಾ ಆರ್‌ಎಫ್‌ಒ ಎಸ್.ಟಿ.ಪಟಗಾರ, ಗ್ರಾಪಂ ಪಿಡಿಒ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.