ಕಾರವಾರ: ನಾವು ಟೋಲ್ ಬಂದ್ ಮಾಡಿದ ಮಾರನೇ ದಿನವೇ ಐಆರ್‌ಬಿ ಕಂಪನಿ ಟೋಲ್ ಪ್ರಾರಂಭ ಮಾಡಿಸಿತು. ನಮ್ಮದು ಟೋಲ್ ಸಂಗ್ರಹ ಸರಿ ಇದೆ ಎಂದು ಪ್ರಾರಂಭ ಮಾಡಿಸಿತು. ಆದರೆ ಟನಲ್ ಸರಿಯಿದ್ದಿದ್ದರೆ ಬಂದ್ ಮಾಡಿದ ಮಾರನೇ ದಿನವೇ ಕಂಪನಿ ಪ್ರಾರಂಭ ಮಾಡಬೇಕಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದ್ದಾರೆ.ಇಲ್ಲಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಸಂಪೂರ್ಣ ಆಗಿಲ್ಲ. ಆದರೂ ಟೋಲ್ ಪ್ರಾರಂಭ ಮಾಡಿದ್ದಾರೆ ಎಂದು ಟೋಲ್ ಬಂದ್ ಮಾಡಿಸಿದ್ದೆವು. ಹಾಗೇ ಟನಲ್ ನಲ್ಲಿ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದೇ ಓಡಾಟ ಮಾಡಿಸಿದ್ದಾರೆ ಎಂದು ಸಹ ಬಂದ್ ಮಾಡಿಸಲಾಗಿತ್ತು. ಆದರೆ ಟೋಲ್ ಪ್ರಾರಂಭ ಮಾಡಿದ ಕಂಪನಿ ಟನಲ್ ಮಾತ್ರ ಪ್ರಾರಂಭ ಮಾಡಿಲ್ಲ. ಟನಲ್ ನಲ್ಲಿ ಎಲ್ಲವೂ ಸರಿಯಿದ್ದಿದ್ದರೆ ಅವರು ಪ್ರಾರಂಭ ಮಾಡಿಸುತ್ತಿದ್ದರು. ಟೋಲನ್ನ ನಾವು ಬಂದ್ ಮಾಡಿಸಿಲ್ಲ. ನಾಳೆ ಏನಾದರು ವ್ಯತ್ಯಾಸ ಆದರೆ ಅವರೇ ಜವಾಬ್ದಾರಿ. ನಾವು ಜಿಲ್ಲಾಧಿಕಾರಿಗಳಿಗೆ ಕೇಳಿದ್ದು ಅವರೂ ಸಹ ನಮಗೆ ಈವರೆಗೆ ಯಾವ ದಾಖಲೆ ಕೊಟ್ಟಿಲ್ಲ ಎಂದಿದ್ದಾರೆ. ಜನರು ಸಾಯುವುದನ್ನ ಮೊದಲು ತಪ್ಪಿಸುವ ಕೆಲಸ ಮಾಡಬೇಕು ಎಂದರು.ನಮ್ಮ ಜಿಲ್ಲೆಯಲ್ಲಿ ಯಾರು ಬಾಯನ್ನು ಎತ್ತುತ್ತಿಲ್ಲ. ಟನಲ್ ಮತ್ತೆ ಪ್ರಾರಂಭ ಮಾಡುವುದಾದರೆ ನಮ್ಮದು ವಿರೋಧವಿಲ್ಲ. ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್ ಅವರಿಗೂ ಮನವಿ ಮಾಡಿಕೊಳ್ಳುತ್ತೇನೆ. ಭಟ್ಕಳದಿಂದ ಕಾರವಾರದ ವರೆಗೆ ಎಷ್ಟು ದಿನದಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಹೇಳಲಿ. ಇಲ್ಲದಿದ್ದರೇ ಟೋಲ್ ಯಾವಾಗ ಬಂದ್ ಮಾಡುತ್ತಾರೆ ಎನ್ನುವುದನ್ನ ಹೇಳಲಿ ಎಂದಿದ್ದಾರೆ. ಹೆದ್ದಾರಿ ಅಗಲೀಕರಣ ಕಾರ್ಯ ಪ್ರಾರಂಭ ಮಾಡಿ 9 ವರ್ಷವಾದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಆದರೆ 3 ವರ್ಷಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಅರ್ಧದಷ್ಟು ಕೆಲಸ ಆದ ವೇಳೆಯೇ ಟೋಲ್ ಸಂಗ್ರಹ ಮಾಡಲು ಪ್ರಾರಂಭಿಸಲಾಗಿದೆ. ಟೋಲ್ ವಸೂಲಿ ಮಾಡಿದ್ದು ಐ.ಆರ್.ಬಿ ಕಂಪನಿಗೆ ಹೋಗಿದೆಯೋ ಇಲ್ಲವೋ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.ಮಂಕಾಳ ವೈದ್ಯ ಅವರ ಉದ್ದೇಶ ನನ್ನ ಜಿಲ್ಲೆಯಲ್ಲಿ ಸರಿಯಾಗಿ ವ್ಯವಸ್ಥಿತವಾಗಿ ರಸ್ತೆ ಮಾಡಲಿ. ಕಂಪನಿ ಮಾಲಿಕರು ಕೇಂದ್ರ ಸಚಿವರೇ ಆಗಲಿ ಯಾರೇ ಆಗಲಿ ಅವರ ವಿರುದ್ದ ಹೋರಾಟ ಇದ್ದೇ ಇರುತ್ತದೆ. ನನಗೂ ಟನಲ್ ಗೂ ಸಂಬಂಧ ಇಲ್ಲ. ಆದರೇ ನನಗೂ ಐಆರ್.ಬಿ ರಸ್ತೆಗೂ ಸಂಬಂಧ ಇದೆ. ಮೂರು ವರ್ಷ ಟೋಲ್ ಪ್ರಾರಂಭ ಮಾಡಿ ಇನ್ನೂ ರಸ್ತೆ ಮುಗಿಸಿಲ್ಲ ಎಂದಾದರೆ ಮಾತನಾಡಬಾರದೇ. ಜಿಲ್ಲೆಯ ಜನ ಅವರು ಮಾಡುವುದು ಸರಿ, ಮಂಕಾಳ ವೈದ್ಯ ಮಾತನಾಡುವುದು ತಪ್ಪು ಎನ್ನುವುದಾದರೆ ಕ್ಷಮಿಸಿ ಎಂದು ಮಂಕಾಳ ವೈದ್ಯ ಆಕ್ರೋಶ ಹೊರಹಾಕಿದ್ದಾರೆ.