ಗೋಕರ್ಣ: ನಮ್ಮ ಪರಿಶ್ರಮದಿಂದ ಬಂದ ಸಂಪತ್ತಿನಿ0ದ ನಾವು ಸಂತುಷ್ಟರಾಗಬೇಕು. ಆಗ ಮಾತ್ರ ನಿಜ ಅರ್ಥದಲ್ಲಿ ಮನಃಶಾಂತಿ ಸಿಗಲು ಸಾಧ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು ದಕ್ಷಿಣ ಬೆಂಗಳೂರು ಮಂಡಲದ ಅನ್ನಪೂರ್ಣೇಶ್ವರಿ, ರಾಜರಾಜೇಶ್ವರಿ ಮತ್ತು ಕೋರಮಂಗಲ ವಲಯಗಳಿಂದ ಆಗಮಿಸಿದ ಶಿಷ್ಯರಿಂದ ಶ್ರೀಗುರುಭಿಕ್ಷಾಸೇವೆ ಸ್ವೀಕರಿಸಿ ಸಂಪತ್ತು- ಸಂತೃಪ್ತಿ ವಿಷಯದಲ್ಲಿ ಶ್ರೀಸಂದೇಶ ನೀಡಿದರು.
ಬದುಕಿನಲ್ಲಿ ಮುಖ್ಯವಾಗಿ ನಾಲ್ಕು ವರ್ಗದ ಜನರನ್ನು ನಾವು ಕಾಣುತ್ತೇವೆ. ಮೊದಲನೆಯ ಸಂಪತ್ತು ಇದ್ದು, ಸಂತೃಪ್ತಿ ಇಲ್ಲದವರು, ಮತ್ತೊಂದು ವರ್ಗ ಸಂಪತ್ತು ಇಲ್ಲದಿದ್ದರೂ ಸಂತೃಪ್ತಿ ಇರುವವರು. ಸಂಪತ್ತೂ ಇಲ್ಲ ಸಂತೃಪ್ತಿಯೂ ಇಲ್ಲದ ವರ್ಗ ಇನ್ನೊಂದಾದರೆ, ಸಂಪತ್ತು ಮತ್ತು ಸಂತೃಪ್ತಿ ಎರಡೂ ಇರುವುದು ಕೊನೆಯ ವರ್ಗ. ಮನೆ ಮತ್ತು ಮನಸ್ಸು ಎಂದೂ ಬಡವಾಗಿರಬಾರದು. ನಮ್ಮ ಪೂರ್ವಜನ್ಮದ ಪಾಪ- ಪುಣ್ಯಗಳ ಫಲವನ್ನು ನಾವು ಈ ಜನ್ಮದಲ್ಲಿ ಪಡೆಯುತ್ತೇವೆ ಎಂದು ಹೇಳಿದರು.
ಸಂಪತ್ತು ಇಲ್ಲದಿದ್ದರೂ ಸಂತೃಪ್ತಿ ಹೊಂದುವ ಭಾವ ನಮ್ಮದಾಗಬೇಕು. ರಾಮಾಯಣದಲ್ಲಿ ಆದಿಕವಿ ವಾಲ್ಮೀಕಿ ಅಯೋಧ್ಯಾ ವರ್ಣನೆಯಲ್ಲಿ ಇದನ್ನು ಹೇಳಿದ್ದು, ಅಯೋಧ್ಯೆ ಸಂಪತ್ತು ಮತ್ತು ಸಂತೃಪ್ತಿಯ ತಾಣವಾಗಿತ್ತು ಎಂದು ಬಣ್ಣಿಸಿದ್ದಾರೆ. ತೃಷ್ಣೆ (ದಾಹ)ವನ್ನು ಬಿಟ್ಟು ತೃಪ್ತಿಯನ್ನು ಸಾಧಿಸಬೇಕು. ಇರುವುದರಲ್ಲಿ ಸಂತಸಪಡದೇ ಇಲ್ಲದ್ದನ್ನು ಅರಸುತ್ತಾ ಕಾಲ ಕಳೆಯುವವರು ಎಂದೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ತನ್ನ ಆಸೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವವನು ನಿಜವಾದ ಶ್ರೀಮಂತ ಹಾಗೂ ಇರುವುದರಲ್ಲಿ ತೃಪ್ತಿ ಇಲ್ಲದಿದ್ದರೆ ಎಷ್ಟು ಸಂಪತ್ತು ಇದ್ದರೂ ಆತ ಬಡವ. ಜೀವನದಲ್ಲಿ ಇರುವುದರಲ್ಲಿ ಸಂತಸಪಟ್ಟರೆ ಮನಃಶಾಂತಿ ಸಾಧ್ಯ ಎಂದರು.
ಮನಸ್ಸು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಯಾವ ಶಿಕ್ಷಣ ಪಡೆದರೂ ಅದು ನಿರರ್ಥಕ. ಎಂಥ ಪರಿಸ್ಥಿತಿ ಬಂದರೂ ಮನಸ್ಸು ಧನಾತ್ಮಕವಾಗಿ ಅದನ್ನು ಪರಿಗಣಿಸುವಂತೆ ಮಾಡುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು. ಸಕಾರಾತ್ಮಕ ಮನೋಭಾವದಿಂದ ಮಾತ್ರವೇ ಮನಃಶಾಂತಿ ಸಾಧ್ಯ ಎಂದು ವಿಶ್ಲೇಷಿಸಿದರು. ದೇವರು ಜೀವನದ ಪ್ರತಿಯೊಂದು ಘಟನೆಯಲ್ಲೂ ಒಂದು ಒಳ್ಳೆಯದನ್ನು ಇಟ್ಟಿರುತ್ತಾನೆ. ಅದನ್ನು ಗುರುತಿಸುವ ದೃಷ್ಟಿ ನಮ್ಮದಾಗಬೇಕು. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಮಾತ್ರವೇ ತೃಪ್ತಿಯಿಂದ ಇರಲು ಸಾಧ್ಯ. ಜೀವನದಲ್ಲಿ ತೃಪ್ತಿ ಸಾಧಿಸಲು ನಮ್ಮ ಮನಸ್ಸನ್ನು ಹೊಂದಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ದಕ್ಷಿಣ ಬೆಂಗಳೂರು ಮಂಡಲ ಉಪಾಧ್ಯಕ್ಷ ಎನ್.ಜಿ.ಭಾಗ್ವತ್, ಕಾರ್ಯದರ್ಶಿ ಶ್ಯಾಮಪ್ರಸಾದ್ ಚೇರಾಲು, ಸಂಘಟನಾ ಕಾರ್ಯದರ್ಶಿ ರಮೇಶ್ ಸುರ್ಡೇಲು, ಮಾತೃವಿಭಾಗದ ಅನಿತಾ ಮಹಾಬಲೇಶ್ವರ ಹೆಗಡೆ ಮತ್ತಿತರರು ವೇದಿಕೆಯಲ್ಲಿದ್ದರು. ಸಂಘಟನಾ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ.ಭಟ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್, ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ವಿವಿವಿ ಶಿಕ್ಷಣ ವಿಭಾಗದ ಮುಖ್ಯಸ್ಥೆ ಅಶ್ವಿನಿ ಉಡುಚೆ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು. ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ 9 ಮಂದಿಯನ್ನು ಸನ್ಮಾನಿಸಲಾಯಿತು. ಎಂಟು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.