ಶಿರಸಿ: ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಶಿರಸಿ ವತಿಯಿಂದ ಜಾನಪದ ತಜ್ಞರು, ನಾಡೋಜ ಪ್ರಶಸ್ತಿ ಪುರಸ್ಕೃತರು ಡಾ.ಗೋ.ರು.ಚನ್ನಬಸಪ್ಪ ಅವರಿಗೆ ಸಮರ್ಪಣೆಯ ಜಿಲ್ಲಾಮಟ್ಟದ ಕಬ್ಸ್, ಬುಲ್ ಬುಲ್, ಸ್ಕೌಟ್ ಎಂಡ್ ಗೈಡ್ಸ್ ದಳನಾಯಕರುಗಳ ದೇಶಭಕ್ತಿ ಗೀತಗಾಯನ ಸ್ಪರ್ಧೆ ರೋವರ್ಸ್ ರೇಂಜರ್ಸ್ಗಳ ಜಾನಪದ ಗೀತಗಾಯನ ಸ್ಪರ್ಧೆ ಗಾಣಿಗ ಸಮುದಾಯ ಭವನದಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ಸ್ಕೌಟ್ ವಿಭಾಗದ ದಳನಾಯಕರ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಯಮುನಾ ಪೈ, ದ್ವಿತೀಯ ಸ್ಥಾನ ರಾಘವೇಂದ್ರ ಹೊಸೂರ, ತೃತೀಯ ಸ್ಥಾನ ಎನ್ ಎಸ್ ಭಾಗ್ವತ್ ಹಾಗೂ ಗೈಡ್ ವಿಭಾಗದ ದಳನಾಯಕರ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪದ್ಮಾವತಿ ನಾಯ್ಕ, ದ್ವಿತೀಯ ಸ್ಥಾನ ವೀಣಾ ಭಟ್, ತೃತೀಯ ಸ್ಥಾನ ಚೇತನಾ ಎಸ್ ಪಿ ಇವರು ಪಡೆದುಕೊಂಡರು. ಸ್ಕೌಟ್ ವಿಭಾಗದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಶಿರಸಿ ತಾಲೂಕು, ದ್ವಿತೀಯ ಸ್ಥಾನ ಯಲ್ಲಾಪುರ ತಾಲೂಕು, ತೃತೀಯ ಸ್ಥಾನ ಹಳಿಯಾಳ ತಾಲೂಕು ಹಾಗೂ ಗೈಡ್ ವಿಭಾಗದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಶಿರಸಿ ತಾಲೂಕು, ದ್ವಿತೀಯ ಸ್ಥಾನ ಸಿದ್ದಾಪುರ ತಾಲೂಕು, ತೃತೀಯ ಸ್ಥಾನ ಯಲ್ಲಾಪುರ ತಾಲೂಕು ಪಡೆದುಕೊಂಡಿದೆ.
ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ಟಿ.ನಾಯ್ಕ ಉದ್ಘಾಟಿಸಿ ವ್ಯಸನಮುಕ್ತ ಸಮಾಜ ಮಾಡಲು ಶಿಸ್ತು, ಸಮಯ ಪ್ರಜ್ಞೆ, ಮೂಲಭೂತ ಶಿಕ್ಷಣ ಮುಖ್ಯವಾದದ್ದು ಭಾರತ ಸ್ಕೌಟ್ ಮತ್ತು ಗೈಡ್ಸ್ ರೂಪುರೇಷೆಗಳು, ನಿಯಮಾವಳಿಗಳು ಇನ್ನೂ ಹೆಚ್ಚು ಯುವಕ, ಯುವತಿಯರಲ್ಲಿ, ಗ್ರಾಮೀಣ ಭಾಗಗಳಲ್ಲಿ ತಲುಪಬೇಕು ಎಂದು ಹೇಳಿದರು. ಭಾರತ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಅಭಿಮಾನ ಪೂರಕವಾಗಿ ಶಾಸಕರನ್ನು ಸನ್ಮಾನಿಸಲಾಯಿತು.
ಸಹ ಕಾರ್ಯದರ್ಶಿ ಕಿರಣ್ ಫರ್ನಾಂಡಿಸ್ ನಿರೂಪಣೆ ಮಾಡಿದರು. ಸ್ಕೌಟ್ ರಾಜ್ಯ ಪ್ರತಿನಿಧಿ ನವೀನಕುಮಾರ ಎ.ಜಿ. ಪ್ರಾಸ್ತಾವಿಕ ನುಡಿಗಳನಾಡಿದರು. ಎಮ್.ಎಮ್.ಭಟ್ ಸ್ವಾಗತಿಸಿದರು. ವಿ.ಎಚ್.ಭಟ್ಕಳ ವಂದನಾರ್ಪಣೆಯನ್ನು ಮಾಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಬಸವರಾಜ, ಸ್ಕೌಟ್ ಜಿಲ್ಲಾ ಮುಖ್ಯ ಆಯುಕ್ತ ಎಮ್.ಎಮ್.ಭಟ್, ಜಿಲ್ಲಾ ಆಯುಕ್ತ ವಿ.ಎಚ್.ಭಟ್ಕಳ, ಜಿಲ್ಲಾ ಕಾರ್ಯದರ್ಶಿ ಟಿ.ಕೆ.ನಾಯ್ಕ, ಜಿಲ್ಲಾ ಜಂಟಿ ಕಾರ್ಯದರ್ಶಿ ಎನ್.ಎಸ್.ಭಾಗ್ವತ್, ಜಿಲ್ಲಾ ತರಬೇತಿ ಆಯುಕ್ತರಾದ ಚಂದ್ರಶೇಖರ ಎಸ್.ಸಿ., ಬೀಬಿ ಮರಿಯಮ್ಮ, ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವೀರೇಶ ಮಾದರ ಭಾಗವಹಿಸಿದ್ದರು. ಈ ಸ್ಪರ್ಧೆಯ ನಿರ್ಣಾಯಕರಾಗಿ ಪ್ರದೀಪ್ ಭಟ್, ಚೇತನಾ ಹೆಗಡೆ, ಕಾವ್ಯಾ ಹೆಗಡೆ ಇದ್ದರು.