ಯಲ್ಲಾಪುರ: ಜಿಲ್ಲಾ ಪಂಚಾಯತ, ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆವತಿಯಿಂದ ಪಟ್ಟಣದ ಬಸ್ ನಿಲ್ದಾಣ ಸಮೀಪದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತ್ಯ ಶ್ಯಾಮಲ ಸಸಿ ವಿತರಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶಾಲಾ ಆವಾರದಲ್ಲಿ ಸಸಿ ನೆಟ್ಟು ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಜಿ ಹೆಗಡೆ, ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಸಸ್ಯ ಶಾಮಲಾ ಪ್ರಾರಂಭವಾಗಿದೆ. ಸೆ.೧೧ಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಭವಿಷ್ಯದ ಭಾರತದ ಪ್ರಜೆಗಳಿಗೆ ಪರಿಸರದ ಕುರಿತು ಜಾಗೃತಿ ಕಾರ್ಯಕ್ರಮ ಇದಾಗಿದೆ. ತಾಲೂಕಿನ ಪ್ರತಿ ಶಾಲೆಯಲ್ಲಿ ೫೦ ರಿಂದ ೧೦೦ ಗಿಡಗಳನ್ನು ಅರಣ್ಯ ಇಲಾಖೆ ನೀಡುತ್ತಿದೆ. ಯಲ್ಲಾಪುರ ತಾಲೂಕಿನ ಶಾಲೆಗಳಿಗೆ ಎಷ್ಟು ಗಿಡಗಳು ಬೇಕು ಎನ್ನುವುದರ ಕುರಿತು ಕ್ಷೇತ್ರ ಶಿಕ್ಷಣ ಇಲಾಖೆ ಈಗಾಗಲೇ ಪಟ್ಟಿಯನ್ನು ನೀಡಿದೆ. ಈ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ಈ ಹಿಂದೆ ಸೆ.೫ರಂದು ಪರಿಸರ ದಿನಾಚರಣೆ ಆಚರಿಸಲಾಗುತ್ತಿತ್ತು. ರಾಜ್ಯ ಸರ್ಕಾರ ರಾಜ್ಯಾದ್ಯಂತ ೫೦ ಲಕ್ಷ ಗಿಡಗಳನ್ನು ಸೆ.೧೧ರಿಂದ ೨೨ರವರೆಗೆ ಶಾಲೆಗಳಲ್ಲಿ ನೆಟ್ಟು ಪಾಲನೆ ಪೋಷಣೆ ಮಾಡುವಂತೆ ಹಾಗೂ ಬೆಳವಣಿಗೆಯನ್ನು ದಾಖಲೀಕರಣ ಮಾಡುವಂತೆ ಈಗಾಗಲೇ ಸೂಚನೆ ನೀಡಿದೆ. ಶಾಸಕ ಶಿವರಾಮ ಹೆಬ್ಬಾರ್ ಸತ್ಯ ಶ್ಯಾಮಲ ಕಾರ್ಯಕ್ರಮವನ್ನು ಈಗಾಗಲೇ ಉದ್ಘಾಟನೆ ಗೊಳಿಸಿದ್ದಾರೆ. ಯಲ್ಲಾಪುರ ತಾಲೂಕಿನ ಶಾಲೆಗಳು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ಇಲಾಖೆಯ ಸರ್ಕಾರದೊಂದಿಗೆ ಶಾಲೆಗಳಿಗೆ ಗಿಡ ನೆಡುತ್ತಿದ್ದೇವೆ. ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಮತ್ತು ಗಿಡ ನೆಡುವ ಕುರಿತು ೨೦ ಅಂಕಗಳ ಪ್ರಾಜೆಕ್ಟ್ ರೀತಿಯಲ್ಲಿ ಕೊಟ್ಟು ಯೋಜನೆಯನ್ನು ಯಶಸ್ವಿಗೊಳಿಸಲು ಯೋಚಿಸುತ್ತಿದ್ದೇವೆ ಎಂದು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆನಂದ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ಆರ್ಎಫ್ಒ ಎಲ್.ಎ.ಮಠ, ಮಾದರಿ ಶಾಲೆಯ ನಿಯೋಜಿತ ಎಸ್ಡಿಎಂಸಿ ಅಧ್ಯಕ್ಷ ಸಂತೋಷ ಗುಡಿಗಾರ, ಮುಖ್ಯ ಶಿಕ್ಷಕಿ ಅನುಸುಯಾ ಹಾರ್ವೇಡಕರ, ಸಿಅರ್ಪಿ ಸಂಜೀವ ಕುಮಾರ ಹೊಸ್ಕೇರಿ, ಡಿಆರ್ಎಫ್ಓಗಳಾದ ಸಂಜಯಕುಮಾರ ಎಂ.ಬಿ., ಸಂತೋಷ ಬೊರಡಳ್ಳಿ, ಎಸ್ಡಿಎಂಸಿ ಸದಸ್ಯರಾದ ಪ್ರಕಾಶ ಕಟ್ಟಿಮನಿ, ಗಾಯತ್ರಿ ಬೊಳಗುಡ್ಡೆ, ಶಿಕ್ಷಕಿ ಜ್ಯೋತಿ ಹಳ್ಳೆರ್ ಈ ಸಂದರ್ಭದಲ್ಲಿದ್ದರು.