ಶಿರಸಿ: ಜ್ವಲಂತ ಅರಣ್ಯವಾಸಿಗಳ ಸಮಸ್ಯೆಗೆ ಕಾನೂನಾತ್ಮಕ ಪರಿಹಾರಕ್ಕೆ ಸರಕಾರ ಬದ್ಧವಾಗಿದ್ದು, ಪರಿಹಾರಕ್ಕಾಗಿ ಸರಕಾರವು ಗಂಭೀರ ಚಿಂತನೆಯೊಂದಿಗೆ ಸೆಪ್ಟೆಂಬರ್ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಕಾನೂನು ತಜ್ಞರ ವಿಶೇಷ ಸಭೆ ಕರೆಯಲು ಕಾನೂನು ಇಲಾಖೆ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.
ಅವರು ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೊರಿಯಮ್, ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಛಾಯಾಚಿತ್ರ ಪ್ರದರ್ಶನದ ಕಾರ್ಯಕ್ರಮವನ್ನ ಉದ್ಘಾಟಿಸಿ ಹಿರಿಯ ಸಚಿವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅರಣ್ಯವಾಸಿಗಳನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದರು.
ಅರಣ್ಯವಾಸಿಗಳು ಅರಣ್ಯ ಸಾಂದ್ರತೆ ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡ ಲಕ್ಷ ವೃಕ್ಷ ಅಭಿಯಾನವು ರಚನಾತ್ಮಕ ಕಾರ್ಯವಾಗಿದ್ದಲ್ಲದೇ ಅರಣ್ಯವಾಸಿಗಳು ಪರಿಸರ ಪರ ಎಂಬ ಸಂದೇಶ ಸಾರುತ್ತದೆ ಎಂದು ಲಕ್ಷ ವೃಕ್ಷ ಗಿಡ ನೆಡುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ರೈತರ ಭದ್ರತೆ, ದೇಶದ ಭದ್ರತೆ:
ರೈತರ ಸಮಸ್ಯೆ ಬಗೆಹರಿಸಿದಾಗ ರೈತರ ಬದ್ಧತೆ ಜೊತೆಯಲ್ಲಿ ದೇಶದ ಭದ್ರತೆಯು ಹೆಚ್ಚುವುದು. ಭಾರತದಲ್ಲಿ 25 ಕೋಟಿ ಅರಣ್ಯವಾಸಿಗಳಿದ್ದು ಸರಕಾರ ಸಕರಾತ್ಮಕವಾಗಿ ಅರಣ್ಯವಾಸಿಗಳ ಪರ ಚಿಂತಿಸಬೇಕು. ಸೈದ್ಧಾಂತಿಕ ಸಂಘರ್ಷದಿಂದ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ ಹೇಳಿದರು.
ಅರಣ್ಯವಾಸಿ ಸಮಸ್ಯೆಗಳ ಅಧ್ಯಯನಕ್ಕೆ ಜಿಲ್ಲೆಗೆ ಅರಣ್ಯ ಸಚಿವ ಖಂಡ್ರೆ
ಮುಂದಿನ ದಿನಗಳಲ್ಲಿ ಖುದ್ದಾಗಿ ಉತ್ತರ ಕನ್ನಡ ಜಿಲ್ಲೆಗೆ ಭೇಟ್ಟಿ ನೀಡಿ ಅರಣ್ಯವಾಸಿಗಳ ಸಮಸ್ಯೆ ಅಧ್ಯಯನಕ್ಕೆ ಅರಣ್ಯವಾಸಿಗಳೊಂದಿಗೆ ಚರ್ಚಿಸಲಾಗುವುದೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಂದೇಶ ಕಳುಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಮಸ್ಯೆ ಪರಿಹಾರ ನಮ್ಮೆಲ್ಲರ ಜವಾಬ್ದಾರಿ ಶಾಸಕ ಭೀಮಣ್ಣ:
ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸಲು ಶಾಸಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅರಣ್ಯ ಭೂಮಿ ಹಕ್ಕಿಗೆ ಸರಕಾರದ ಮಟ್ಟದಲ್ಲಿ ಪೂರ್ಣ ಪ್ರಮಾಣದ ಕಾರ್ಯ ನಿರ್ವಹಿಸಲಾಗುವುದೆಂದು ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನ್ಯಾಯಯುತ ಪರಿಹಾರ ಆಗಬೇಕು ಆರ್.ವಿ.ಡಿ:
ಅರಣ್ಯ ಭೂಮಿ ಹಕ್ಕು ನಿರ್ಣಯದಲ್ಲಿ ನ್ಯಾಯಯುತ ಪರಿಹಾರವಾಗಬೇಕಾಗಿದ್ದು, ಸರಕಾರ ಈ ದಿಶೆಯಲ್ಲಿ ಸರಕಾರ ಪ್ರಾಮಾಣಿಕ ಪ್ರಯತ್ನ ಮುಂದುವರೆಸಲಾಗುವುದೆಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಕಾನೂನು ಹೋರಾಟಕ್ಕೆ ಶಾಸಕ ಸೈಲ್ ಕರೆ:
ಅರಣ್ಯ ಭೂಮಿ ಹಕ್ಕು ಕೊಡುವಲ್ಲಿ ಸಮಸ್ಯೆ ಉಂಟಾದಲ್ಲಿ ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಸರಕಾರ ಅರಣ್ಯವಾಸಿಗಳ ಪರವಾಗಿದೆ ಎಂದು ಕಾರವಾರ ಶಾಸಕ ಸತೀಶ್ ಸೈಲ್ ಹೇಳಿದರು.
ಅಭೂತಪೂರ್ವ ಛಾಯಾಚಿತ್ರ ಬೆಂಗಳೂರಿನಲ್ಲಿ ಪ್ರದರ್ಶನ:
ಪರಿಸರ ಜಾಗೃತೆ ಮತ್ತು ಅರಣ್ಯ ಸಾಂದ್ರತೆ ಹೆಚ್ಚಿಸುವಿಕೆಯ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ 32 ವರ್ಷದಿಂದ ಹೋರಾಟ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ, ಬೆಂಗಳೂರಿನಲ್ಲಿ ಸೆ. 14 ರಂದು ಸಾವಿರ ಛಾಯಾಚಿತ್ರ ಪ್ರದರ್ಶನವನ್ನು ಅಭೂತ ಪೂರ್ವವಾಗಿ ಜರುಗಿದ್ದು ಆಗಮಿಸಿದ ಗಣ್ಯರಿಂದ ಪ್ರಶಂಶೆಗೆ ಪಾತ್ರವಾಯಿತು.
ಜಿಲ್ಲಾದ್ಯಂತ ಅಭಿಯಾನದಲ್ಲಿ ವಿವಿಧ ರೀತಿಯ ಜಾತಿಯ ಗಿಡ ಮರಗಳನ್ನು ನೆಟ್ಟಿರುವ ಚಿತ್ರಣವನ್ನ ಹಾಗೂ ಅರಣ್ಯವಾಸಿಗಳ ಗಿಡ ನೆಡುವಿಕೆಯ ಆಸಕ್ತಿಯ ಛಾಯಾಚಿತ್ರಗಳು ಸಾರ್ವಜನಿಕವಾಗಿ ಗಮನ ಸೆಳೆದವು.
ಮೂರು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು:
ಬೆಂಗಳೂರಿನಲ್ಲಿ ಜರುಗಿದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಛಾಯಾಚಿತ್ರ ಪ್ರದರ್ಶನದಲ್ಲಿ ಜಿಲ್ಲಾದ್ಯಂತ ಮೂರು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಿರುವುದು ವಿಶೇಷವಾಗಿದ್ದು, ಮುಂದಿನ ದಿನಗಳಲ್ಲಿ ಭೂಮಿ ಹಕ್ಕಿಗಾಗಿ ಹೋರಾಟ ಮುಂದುವರೆಸಲು ಅರಣ್ಯವಾಸಿಗಳು ನಿರ್ಧರಿಸಿದರು.
ಸಭೆಯಲ್ಲಿ ಪ್ರಧಾನ ಸಂಚಾಲಕ ಜಿಎಮ್ ಶೆಟ್ಟಿ ಅಂಕೋಲಾ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಅರಣ್ಯವಾಸಿಗಳ ಸಮಸ್ಯೆಗಳ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿದರು. ತಾಲೂಕಾ ಅಧ್ಯಕ್ಷರುಗಳಾದ ಭೀಮ್ಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ಸುಭಾಷ್ ಗಾವಡಾ ಜೊಯಿಡಾ, ಮಾಭ್ಲೇಶ್ವರ ನಾಯ್ಕ ಸಿದ್ದಾಪುರ, ಪಾಡುರಂಗ ನಾಯ್ಕ ಭಟ್ಕಳ, ರಮಾನಂದ ನಾಯ್ಕ ಅಂಕೋಲಾ, ವಿನೋದ ಯಲಕೊಟಗಿ ಹೊನ್ನಾವರ, ರಾಮಾ ಮರಾಠಿ, ಶಬ್ಬೀರ್ ಭಟ್ಕಳ, ದೇವರಾಜ ಮರಾಠಿ ಬಂಡಲ, ನೆಹರೂ ನಾಯ್ಕ ಬಿಳೂರು, ಎಮ್.ಆರ್. ನಾಯ್ಕ ಕಂಡ್ರಾಜಿ, ಸ್ವಾಮಿ ಉಳವಿ ಮುಂತಾದವರು ಉಪಸ್ಥಿತರಿದ್ದರು. ಬಾಲಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ರಾಘವೇಂದ್ರ ನಾಯ್ಕ ಕವಂಚೂರು ವಂದಿಸಿದರು.