ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಅಪರೂಪದ ಹಾಗೂ ಅಮೂಲ್ಯ ಗ್ರಂಥಗಳನ್ನೊಳಗೊ0ಡ ಅಪೂರ್ವ ಗ್ರಂಥಾಲಯ ನಿರ್ಮಾಣವಾಗಲಿದ್ದು, ಮಂಗಳೂರು ಹೋಬಳಿಯ ಶಿಷ್ಯಭಕ್ತರ ಸೇವೆಯಾಗಿ ಇದು ಸಮರ್ಪಣೆಯಾಗಲಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿವಿವಿ ಆವರಣದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು 73ನೇ ದಿನ ಉಪ್ಪಿನಂಗಡಿ ಮಂಡಲದ ಪಂಜ, ಬೆಳ್ಳಾರೆ, ಬೆಟ್ಟಂಪಾಡಿ ಮತ್ತು ಚೊಕ್ಕಾಡಿ ವಲಯಗಳ ಶಿಷ್ಯಭಕ್ತರಿಂದ ಗುರುಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಮಾಣಿ ಮಠದಲ್ಲಿ ಈ ಬಾರಿ ನಡೆಯುವ ನವರಾತ್ರಿ ಉತ್ಸವದಲ್ಲಿ ಸಮರ್ಪಣೆಯಾಗುವ ಎಲ್ಲ ಕಾಣಿಕೆ ವಿವಿವಿ ಗ್ರಂಥಾಲಯಕ್ಕೆ ವಿನಿಯೋಗವಾಗಲಿದೆ. ನವರಾತ್ರಿ ಸರಸ್ವತಿಯ ಪೂಜೆ ಸಂದರ್ಭದ ಉತ್ಸವ ಕಾಣಿಕೆಯನ್ನು ವಿದ್ಯಾದೇವತೆಯಾದ ಸರಸ್ವತಿಗೆ ಗ್ರಂಥಾಲಯ ನಿರ್ಮಾಣ ರೂಪದಲ್ಲಿ ವಿನಿಯೋಗಿಸಲಾಗುತ್ತದೆ ಎಂದು ವಿವರಿಸಿದರು. ಹಿಂದೆ ತಕ್ಷಶಿಲೆ ವಿಶ್ವವಿದ್ಯಾನಿಲಯದಲ್ಲಿ ಬೃಹತ್ ಗ್ರಂಥಾಲಯ ಇತ್ತು. ವಿದೇಶಿ ದಾಳಿ ನಡೆದು ಅದಕ್ಕೆ ಬೆಂಕಿ ಹಚ್ಚಿದಾಗ ಆರು ತಿಂಗಳು ಉರಿಯಿತು ಎನ್ನುವ ಉಲ್ಲೇಖ ಇತಿಹಾಸದಲ್ಲಿದೆ. ಅಂಥ ಭವ್ಯ ಗ್ರಂಥಾಲಯ ವಿವಿವಿ ಆವರಣದಲ್ಲಿ ತಲೆ ಎತ್ತಲಿದೆ ಎಂದು ಹೇಳಿದರು.
ಶಿಕ್ಷಣವೇ ನಿಜವಾದ ಶಕ್ತಿ. ಮಗುವಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂಬ ಮಹದುದ್ದೇಶದಿಂದ ವಿವಿವಿ ತಲೆ ಎತ್ತಿದೆ. ಮುಂದಿನ ಭವ್ಯ ಭವಿಷ್ಯದ ಉದ್ದೇಶದಿಂದ ಸಮಾಜದ ಪ್ರತಿಯೊಂದು ಮಗು ನಮ್ಮ ಗುರುಕುಲ ವ್ಯವಸ್ಥೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು ಎಂದು ಆಶಿಸಿದರು. ಬದುಕಿಗೆ ಶಿಸ್ತು ಮತ್ತು ಸಂವಿಧಾನ ಬೇಕು. ನಮ್ಮ ಪಾರಂಪರಿಕ ಶಿಕ್ಷಣ ಇವೆರಡನ್ನೂ ನೀಡುತ್ತದೆ. ಸಂಸ್ಕಾರರಹಿತ ಶಿಕ್ಷಣ ಅಪಾಯಕಾರಿ. ನಮ್ಮತನವನ್ನು ನಾವು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಆತ್ಮಾಭಿಮಾನಕ್ಕೇ ಧಕ್ಕೆ ಉಂಟಾಗಬಹುದು ಎಂದು ಎಚ್ಚರಿಸಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಮಂಗಳೂರು ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ವೈದಿಕ ಪ್ರಧಾನ ಮಹೇಶ್ ಚೂಂತಾರು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‌ಜಿ ಭಟ್, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಸುಬ್ರಾಯ ಅಗ್ನಿಹೋತ್ರಿ ಮತ್ತು ವಿನಾಯಕ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು. ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ 21 ಮಂದಿಯನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಳ್ಳೇರ ಸಮಾಜದ ವತಿಯಿಂದ ಶ್ರೀಗಳಿಗೆ ಪಾದಪೂಜೆ ಸೇವೆ ನೆರವೇರಿಸಲಾಯಿತು.