ಕಾರವಾರ: ನಗರದ ಗೀತಾಂಜಲಿ ಚಿತ್ರಮಂದಿರದಿ0ದ ಹಬ್ಬುವಾಡದವರೆಗೆ ಹೊಸದಾಗಿ ನಿರ್ಮಿಸಿದ ರಸ್ತೆಗೆ ಶೀಘ್ರದಲ್ಲಿಯೇ ರಸ್ತೆ ವಿಭಜಕ ಹಾಗೂ ಬೀದಿದೀಪಗಳನ್ನು ಅಳವಡಿಸುವಂತೆ ಆಗ್ರಹಿಸಿ ಜಿಲ್ಲಾ ಆಟೋ ಚಾಲಕ ಮತ್ತು ಮಾಲಿಕರ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.
ಹಬ್ಬುವಾಡ ರಸ್ತೆಯು ಹೊರ ರಾಜ್ಯಕ್ಕೆ ಹಾಗೂ ಕಡವಾಡದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಜತೆಗೆ ದಿನನಿತ್ಯ ನೂರಾರು ಆಟೋಗಳು ಓಡಾಡುತ್ತವೆ. ಈ ರಸ್ತೆಯ ಬಹುತೇಕ ಕಾಮಗಾರಿಯು ಮುಗಿದಿದ್ದು, ಬಹಳ ದಿನದಿಮದ ರಸ್ತೆ ವಿಭಜಕ ಹಾಗು ಬೀದಿ ದೀಪಗಳ ಅಳವಡಿಸುವ ಕೆಲಸ ಬಾಕಿ ಇಡಲಾಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಸ್ತೆ ಕಾಮಗಾರಿಗೆ ಮೂರು ಕೋಟಿ ರೂ. ಹಣ ಮಂಜೂರಾಗಿತ್ತು. ಅದರಲ್ಲಿ ಬೀದಿ ದೀಪಗಳ ಅಳಡಿಕೆಗೆ 27 ಲಕ್ಷ ಹಾಗೂ ಚರಂಡಿ ನಿರ್ಮಾಣಕ್ಕೂ ಹಣ ಮೀಸಲಿಡಲಾಗಿದೆ. ಆದರೆ ಆ ಹಣ ಎಲ್ಲಿ ಹೋಯಿತು ಎನ್ನುವುದೇ ತಿಳಿದಿಲ್ಲ. ಹೀಗಾಗಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಪರಿಹರಿಸಬೇಕು. 15 ದಿನದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸುಭಾಷ ಗುನಗಿ, ಕಾರ್ಯದರ್ಶಿ ರೋಷನ ಹರಿಕಂತ್ರ, ರಾಜೇಶ ಹರಿಕಂತ್ರ, ಸಹ ಕಾರ್ಯದರ್ಶಿ ಗೋಪಾಲ ಗೌಡ, ಸಂತೋಷ ಪೆಡ್ನೇಕರ, ಸುನೀಲ ತಾಂಡೇಲ ಹಾಗೂ ಸದಸ್ಯರು ಇದ್ದರು.