Slide
Slide
Slide
previous arrow
next arrow

ಅಂತರ್ ಜಿಲ್ಲಾ ಕಳ್ಳರ ಬಂಧನ; 15 ಬೈಕ್ ವಶಕ್ಕೆ

300x250 AD

ಹೊನ್ನಾವರ: ತಾಲೂಕಿನ ಮಂಕಿ ಠಾಣೆಯ ಪೊಲೀಸರ ತಂಡ ಅಂತರ್‌ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರು ಹುಬ್ಬಳ್ಳಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ, ಧಾರವಾಡ ಜಿಲ್ಲೆ ಕುಂದಗೋಳದ ರವಿಚಂದ್ರ ಶಿವಪ್ಪ ತಳವಾರ ಎಂದು ತಿಳಿದುಬಂದಿದ್ದು, ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿತರು ಮೋಟಾರ್ ವಾಹನವನ್ನು ನಿಲ್ಲಿಸದೇ, ಸಂಶಯಾಸ್ಪದವಾಗಿ ಚಲಾಯಿಸಿಕೊಂಡು ಬಂದಿದ್ದರು. ಪೊಲೀಸರು ಈ ವೇಳೆ ಆರೋಪಿತರನ್ನು ಅಡ್ಡಗಟ್ಟಿ ನಿಲ್ಲಿಸಿ ವಿಚಾರಿಸಿದಾಗ ಸರ್ಮಪಕವಾದ ಉತ್ತರ ನೀಡಿಲ್ಲ. ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಮೋಟಾರ್ ವಾಹನವನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ.

ಮಂಕಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಭರತಕುಮಾರ ವಿ. ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಆರೋಪಿತರು ಉಡುಪಿ ಕಡೆಯಿಂದ ಕಪ್ಪು ಬಣ್ಣದ ಟಿವಿಎಸ್ ರೈಡರ್ ಮೋಟಾರ್ ವಾಹನವನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿತರನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕುಂದಗೋಳ ಮೂಲದ ಆರೋಪಿತರಾದ ಸಲ್ಮಾನ ಇಮಾಮ್‌ಸಾಬ್ ತಹಶೀಲ್ದಾರ, ಜಗದೀಶ ಕೋಟೆಪ್ಪ ಬಂಡಿವಾಡ ಇವರೊಂದಿಗೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಸುಮಾರು 14 ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದರಲ್ಲಿ ಅಂಕೋಲಾ ಪೊಲೀಸ್ ಠಾಣೆಯ 1, ಮುರುಡೇಶ್ವರ ಪೊಲೀಸ್ ಠಾಣೆಯ 1 ಹಾಗೂ ಮಂಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿನ 1 ಮೋಟಾರ್ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್‌ನ್ನು, ಕಳ್ಳತನ ಮಾಡಿದ ಎಲ್ಲಾ ಮೋಟಾರ್ ವಾಹನಗಳನ್ನು ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ. ಇವುಗಳೆಲ್ಲವುಗಳ ಒಟ್ಟು ಮೌಲ್ಯ 8.35 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿತನಾದ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ವಿದ್ಯಾನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿದೆ. ಜಗದೀಶ ಬಂಡಿವಾಡ ಈತನ ಮೇಲೆ ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ.

300x250 AD

ಎಸ್‌ಪಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ, ಡಿವೈಎಸ್‌ಪಿ ಶ್ರೀಕಾಂತ ಕೆ., ಪೊಲೀಸ್ ಉಪಾಧೀಕ್ಷಕರು ಭಟ್ಕಳರವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಸಿಪಿಐ ಚಂದನಗೋಪಾಲ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಭರತಕುಮಾರ ವಿ. ಮತ್ತು ಮುಶಾಹಿದ್ ಅಹ್ಮದ್, ಮುರ್ಡೇಶ್ವರ ಠಾಣೆಯ ಪಿಎಸೈ ಶಿವಕುಮಾರ, ಅಪರಾಧ ವಿಭಾಗದ ಸಿಬ್ಬಂದಿಯವರಾದ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಲೋಕೇಶ ಕತ್ತಿ, ಪುರಂದರ ನಾಯ್ಕ, ವಿಜಯ ನಾಯ್ಕ, ಯಲ್ಲಾಪುರ ಠಾಣೆಯ ಮಹ್ಮದ ಶಫೀ,ರಾಜು ಗೌಡ, ಬಸವನಗೌಡ ಬಿರಾದಾರ ಹಾಗೂ ಸಿಬ್ಬಂದಿಗಳು ಆರೋಪಿತರನ್ನು ದಸ್ತಗಿರಿ ಮಾಡಿ 15 ಮೋಟಾರ್ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಕರಣ ಬೇಧಿಸಿದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಎಸ್‌ಪಿ ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top