ಹಳಿಯಾಳ: 8 ವರ್ಷಗಳಿಂದ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಕುಖ್ಯಾತ ಆರೋಪಿಯನ್ನ ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಯಲಹಂಕದಿoದ ಬಂಧಿಸಿ ತರುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕರ್ನಾಟಕದಾದ್ಯಂತ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಬೆಂಗಳೂರು ಮೂಲದ ರಾಜು ಮಾನೆ ಎಂಬಾತ, 2015ರಿಂದ ಮನೆಕಳ್ಳತನದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೆ ಹಾಜರಾಗದೇ 8 ವರ್ಷಗಳಿಂದ ಸತತವಾಗಿ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತನನ್ನು ಹಿಡಿಯಲು ಪೊಲೀಸರು ತಲೆಕೆಡಿಸಿಕೊಂಡು ಈತನ ಬಂಧನಕ್ಕಾಗಿ ಬಲೆ ಬೀಸಿದ್ದರು.
ಪಿಎಸ್‌ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್‌ಐ ಅಮೀನ್ ಅತ್ತಾರ, ಹವಾಲ್ದಾರ್ ಎಮ್.ಎಮ್.ಮುಲ್ಲಾ ಮತ್ತು ಕಾನಸ್ಟೇಬಲ್ ಶ್ರೀಶೈಲ್ ಜಿ.ಎಮ್. ತಂಡ ಈತನ ಬಂಧನಕ್ಕೆ ಕಾರ್ಯಾಚರಣೆ ನಡೆಸಿತ್ತು. ಆರೋಪಿಯನ್ನು ಹಿಡಿಯಲು ಯಲಹಂಕ ಠಾಣೆಯ ಸಿಬ್ಬಂದಿಗಳಾದ ಮಹಾವೀರ ಮತ್ತು ಕರಿಬಸವರವರ ಸಾಥ್ ಪಡೆದು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಜಿಲ್ಲೆಯ ಹಳಿಯಾಳ, ಹೊನ್ನಾವರ, ಮಂಕಿ, ಕಲಘಟಗಿ, ತಡಸ, ಶಿಗ್ಗಾವಿ ಚೌಕ್ ಹಾಗೂ ರಾಜ್ಯದ ಹಲವಾರು ಊರುಗಳಲ್ಲಿ ಅಪರಾಧ ಕೃತ್ಯವೆಸಗಿದ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದ್ದು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಪೊಲೀಸರಿಗೂ ಹಲವು ಪ್ರಕರಣಗಳಲ್ಲಿ ಬೇಕಾಗಿರುವವನಾಗಿದ್ದಾನೆ ಎನ್ನಲಾಗಿದೆ.