ದಾಂಡೇಲಿ: ತಾನು ಹಸಿದರೂ ಬೇರೆಯವರಿಗೆ ಉಣಬಡಿಸುವ ರೈತ, ಈ ನಾಡಿನ ಹೆಮ್ಮೆಯ ಸ್ವಾಭಿಮಾನದ ಸಂಕೇತ. ನಮ್ಮ ದೇಶದ ಬೆನ್ನೆಲುಬಾಗಿರುವ ನೇಗಿಲಯೋಗಿ ಈ ದೇಶದ ಮಹೋನ್ನತ ಆಸ್ತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರು ಹೇಳಿದರು.
ಅವರು ಬುಧವಾರ ನಗರದ ಕುಳಗಿ ರಸ್ತೆಯಲ್ಲಿರುವ ಹೊಲದಲ್ಲಿ ಆಶಾಕಿರಣ ಐಟಿಐ ಕಾಲೇಜು ಮತ್ತು ಪತ್ರಕರ್ತ ರಾಜೇಶ್ ತಳೇಕರ್ ಅವರ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಭತ್ತದ ನಾಟಿ ತರಬೇತಿ ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಹತ್ತು ಹಲವು ಸಮಸ್ಯೆಗಳ ನಡುವೆಯು ಕೃಷಿ ಬದುಕಿನಲ್ಲೆ ಸಂತೃಪ್ತಿ ಕಾಣುವ ರೈತನ ಬದುಕು ಹಸನಾಗಬೇಕು. ಪ್ರಕೃತಿಯ ವೈಪರೀತ್ಯದ ಜೊತೆ ಜೊತೆಯಲ್ಲಿ ಸಂಕಷ್ಟವನ್ನು ಮೆಟ್ಟಿ ದೇಶದ ಅನ್ನದಾತನಾಗಿರುವ ರೈತ ದೇಶದ ಗೌರವದ ಪ್ರತೀಕ. ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಕೃಷಿ ಅನೇಕ ವಿದ್ಯಾವಂತ ನಿರುದ್ಯೋಗಿಗಳ ಕೈ ಹಿಡಿದಿರುವುದನ್ನು ಯಾರು ಮರೆಯುವಂತಿಲ್ಲ. ಕೃಷಿ ನಮ್ಮ ದೇಶದ ಸಂಸ್ಕೃತಿ. ಕೃಷಿ ಚಟುವಟಿಕೆಯನ್ನು ಉಳಿಸಿ ಬೆಳೆಸುವ ಕರ‍್ಯದಲ್ಲಿ ಈ ಕಾರ‍್ಯಕ್ರಮ ಮಾದರಿಯಾಗಲೆಂದರು.
ಮುಖ್ಯ ಅತಿಥಿಗಳಾಗಿ ಶ್ರೀದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮುಖ್ಯ ಕಾರ‍್ಯನಿರ್ವಾಹಣಾಧಿಕಾರಿ ಕೃಷ್ಣ ಪೂಜಾರಿ, ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಡಿ.ಸ್ಯಾಮನಸ್, ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎನ್.ಆರ್.ನಾಯ್ಕ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ, ರೈತರ ಬೆವರ ಹನಿಯಿಂದಲೆ ನಾವಿಂದು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ. ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಿದರೂ ಕೃಷಿ ಚಟುವಟಿಕೆಯನ್ನು ಮಾತ್ರ ಎಂದು ಮರೆಯಬಾರದೆಂದು ಕಿವಿಮಾತು ಹೇಳಿದರು.
ಪತ್ರಕರ್ತ ರಾಜೇಶ್ ತಳೇಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲ್ಲಿ ನ್ಯಾಯವಾದಿ ರತ್ನಾದೀಪಾ.ಎನ್.ಎಂ, ಸಮಾಜ ಸೇವಕ ಪ್ರಕಾಶ್ ಬೇಟ್ಕರ್, ಯುವ ಮುಖಂಡ ಸುಧೀರ್ ಶೆಟ್ಟಿ, ಶ್ರೀ ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅರ್ಜುನ್ ಮಿರಾಶಿ, ಪಿಎಸ್‌ಐಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ.ಎಸ್, ಕಿರಣ್ ಪಾಟೀಲ್, ಕೃಷ್ಣ ಗೌಡ ಅರಕೆರೆ, ಕೃಷಿಕರಾದ ಸಾವಿತ್ರಿ ಬಾದವಣಕರ, ಸಂತೋಷ್ ಬಾದವಣಕರ, ಅನಿಲ್ ಕೊಲೂರು ಮೊದಲಾದವರು ಉಪಸ್ಥಿತರಿದ್ದರು. ಕರ‍್ಯಕ್ರಮದಲ್ಲಿ ಆಶಾಕಿರಣ ಐಟಿಐ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಗೂ ಸ್ಥಳೀಯ ರೈತ ಬಾಂಧವರು ಉಪಸ್ಥಿತರಿದ್ದರು. ಸಭಾ ಕಾರ‍್ಯಕ್ರಮದ ಬಳಿಕ ಅತಿಥಿ ಗಣ್ಯರೊಂದಿಗೆ ಭತ್ತದ ನಾಟಿ ಮಾಡುವ ಕಾರ‍್ಯಕ್ರಮವು ನಡೆಯಿತು.