ಕುಮಟಾ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉ.ಕ, ಶಿಶು ಅಭಿವೃದ್ಧಿ ಯೋಜನೆ ಕುಮಟಾ, ಹಾಗೂ ಮಾಣಿಕ್ಯ ಚಾರಿಟೇಬಲ್ ಟ್ರಸ್ಟ್ ಹೊನ್ನಾವರ (ರಿ) ಉತ್ತರ ಕನ್ನಡ ಸಹಕಾರದೊಂದಿಗೆ ಪೋಷಣ ಅಭಿಯಾನ ಮತ್ತು ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾ.ಪಂ ಬಂಗಣೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಈ ವೇಳೆ ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ರಾಜ್ಯ ಕಾರ್ಯದರ್ಶಿ ವಿಶ್ವನಾಥ ನಾಯ್ಕ ಮಾತನಾಡಿ, ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಹಿಂದೆ ಸಿರಿಧಾನ್ಯಗಳು, ತರಕಾರಿಗಳನ್ನು ಹೆಚ್ಚಾಗಿ ಬಳಸುವ ಮೂಲಕ ನಮ್ಮ ಹಿರಿಯರು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದರು.ಇಂದಿನ ಮಕ್ಕಳು ತರಕಾರಿಗಳನ್ನು ತೆಗೆದಿಟ್ಟು ಊಟ ಮಾಡುತ್ತಿರುವ ಬೆಳವಣಿಗೆ ಹೆಚ್ಚಾಗುತ್ತಿದೆ. ಸಜ್ಜೆ, ನವಣೆ, ರಾಗಿ, ಅರ್ಕ ಮೊದಲಾದ ಧಾನ್ಯಗಳ ಬಳಕೆ ಹೆಚ್ಚಾಗಬೇಕಿದೆ. ಮಕ್ಕಳು ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ.ಈ ನಿಟ್ಟಿನಲ್ಲಿ ಪೋಷಣ ಅಭಿಯಾನದ ಮೂಲಕ ತಾಯಿ ಹಾಗೂ ಮಗು, ಮಕ್ಕಳ ಆರೋಗ್ಯದ ಕಾಳಜಿಯ ಕುರಿತು ಮಾಹಿತಿ ನೀಡಲಾಗುತ್ತಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಳಿಕ ಸಂತೆಗುಳಿ ಸಿ.ಎಚ್.ಓ ಲಕ್ಷ್ಮೀ ಕೆ.ನಾಯ್ಕ ಮಾತನಾಡಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಮಹತ್ವದಾಗಿದೆ. ತಾಯಿಯ ಹಾಲಿನ ಸೇವನೆಯಿಂದ ಮಗುವು ಅಧಿಕ ತೂಕ ಸಮಸ್ಯೆ, ಮಧುಮೇಹ ,ಅಲರ್ಜಿಗಳು, ರಕ್ತದಲ್ಲಿ ಅಧಿಕ ಕೊಲೆಸ್ಟರಾಲ್ ಅಂಶ ಮುಂತಾದ ಸಮಸ್ಯೆಗಳಿಗಳಿಂದ ದೂರ ಉಳಿಯಬಹುದಾಗಿದೆ.ತಾಯಿಯ ಹಾಲನ್ನು ಪೂರ್ವಾವಧಿಯಾಗಿ ಜನಿಸಿದ ಮಕ್ಕಳಿಗೆ ನೀಡಿದಲ್ಲಿ ಸುಲಭವಾಗಿ ಜೀರ್ಣವಾಗುವ ಪುಡಿ ಹಾಲು ಅಥವಾ ಇನ್ಫ್ಯಾಂಟ್ ಫಾರ್ಮುಲಾಗಳಿಗಿಂತ ಆರೋಗ್ಯಕರವಾಗಿದೆ ಎಂದರು.
ಈ ವೇಳೆ ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿದ್ದು, ಪುಟಾಣಿಗಳು ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧಿಸಿದ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸಿ.ಆರ್.ಪಿ ಈಶ್ವರ ಭಟ್,ಬಂಗಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಹೆಗಡೆ, ಸಹ ಶಿಕ್ಷಕರಾದ ಗಣೇಶ ನಾಯ್ಕ, ಆರೋಗ್ಯ ಇಲಾಖೆಯ ಭಾರತಿ ಆಚಾರಿ, ವಿಜಯಾ ನಾಯ್ಕ, ಬಾಲನಾಗಮ್ಮ, ಗ್ರಾ.ಪಂ ಸದಸ್ಯರಾದ ಈಶ್ವರ ಮರಾಠಿ, ಪುರುಷ ಮರಾಠಿ ಸೇರಿದಂತೆ ಇತರರಿದ್ದರು.ಕಾರ್ಯಕ್ರಮವನ್ನು ಟ್ರಸ್ಟ್ ನ ಅಧ್ಯಕ್ಷರಾದ ಮಾರುತಿ ಸಂಕೊಳ್ಳಿ ಉದ್ಘಾಟಿಸಿದರು.ಅಶ್ವಿನಿ ಭಟ್ ಸ್ವಾಗತಿಸಿದರು. ಕಲಾವತಿ ಮರಾಠಿ ವಂದಿಸಿದರು.ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷರಾದ ಉದಯ ಭಟ್ ಕೂಜಳ್ಳಿ ನಿರೂಪಿಸಿದರು.