ಕಾರವಾರ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನೇವಿ ಚಿಲ್ಡ್ರನ್ ಸ್ಕೂಲ್ನಲ್ಲಿ ನಡೆದ ಸ್ಪರ್ಧೆ ಹಾಗೂ ಕಾರ್ಯಕ್ರಮದಲ್ಲಿ ನಗರದ ಆಶಾನಿಕೇತನ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದರು.
ಮ್ಯಾರಥಾನ್ ಓಟದಲ್ಲಿ ನೇವಿ ಶಾಲೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ಸ್ತರದ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆಶಾನಿಕೇತನ ಶಾಲೆಯ ವಿದ್ಯಾರ್ಥಿಗಳಿಗಾಗಿ ನೇವಿ ಚಿಲ್ಡ್ರನ್ ಸ್ಕೂಲ್ನಿಂದ ಲೆಮನ್ ಸ್ಪೂನ್, ಸ್ಯಾಕ್ ರೇಸ್, ಹಗ್ಗ ಜಗ್ಗಾಟ, 200, 400 ಮೀ. ಓಟವನ್ನು ಆಯೋಜಿಸಲಾಗಿತ್ತು. ಆಶಾನಿಕೇತನದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಸ್ಪರ್ಧೆಯ ನಂತರ ಆಶಾನಿಕೇತನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ತಮ್ಮ ಅದ್ವಿತೀಯ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದ ವಿದ್ಯಾರ್ಥಿಗಳು, ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವಕ್ಕೆ ಮಾದರಿಯಾದರು.
ಕಾರ್ಯಕ್ರಮದಲ್ಲಿ ನೇವಲ್ ವೈವ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷೆ ಆರತಿ ರಾಮಕೃಷ್ಣನ್, ವೈಸ್ ಚೇರ್ಮನ್ ಕಮಾಂಡರ್ ಸಾವಿತ್ರಿ ಪವನರ್, ನೇವಿ ಚಿಲ್ಡ್ರನ್ ಸ್ಕೂಲ್ ಪ್ರಾಚರ್ಯರಾದ ಡಾ.ಅಂಜಲಿ ಸಿಂಹ, ಆಶಾನಿಕೇತನ ಫಾದರ್ ಸ್ಟೀವನ್ ಡಿಸೋಜಾ, ಮುಖ್ಯಶಿಕ್ಷಕಿ ಲೆನೆಟ್ ಲೋಪ್ಸ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.