ಭಟ್ಕಳ: ಬಿಎ ಮತ್ತು ಬಿಕಾಂನ 18 ವಿದ್ಯಾರ್ಥಿಗಳು ಅವರ ಸೆಮಿಸ್ಟರ್ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪಡೆದು ಶನಿವಾರದಂದು ಪರೀಕ್ಷಾ ಕೇಂದ್ರಕ್ಕೆ ಬಂದರೆ ಬರೆಯಲು ಅವಕಾಶ ನೀಡದೆ ಹೊರ ಹಾಕುವ ಮೂಲಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆ.1ರಿಂದ ಕವಿವಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದ್ದು, ಇದರಲ್ಲಿ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿರುವ ಬಿಎ, ಬಿಕಾಂ ಮತ್ತು ಬಿಬಿಎನ ಒಟ್ಟು 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರಾಂಶುಪಾಲರು ಹಾಗೂ ಯುಯುಸಿಎಂಸಿ ಪ್ರಭಾರಿ ನಾಗೇಶ ಶೆಟ್ಟಿ ಹಾಜರಾತಿ ಕಡಿಮೆ ಇದೆ ಎಂದು ಅವಕಾಶ ನೀಡಿಲ್ಲ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರು, ಪರೀಕ್ಷಾ ಕೇಂದ್ರದ ಬಳಿಯೇ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಸಮರ್ಪಕವಾದ ಉತ್ತರ ನೀಡದ ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೇಶ ಪತ್ರ ಬಂದ ಮೇಲೂ, ಯುಯುಸಿಎಂಎಸ್ ವೆಬ್‌ಸೈಟ್‌ನಲ್ಲಿ ಪರೀಕ್ಷೆ ಬರೆಯಲು ಅರ್ಹ ಎಂದಿದ್ದರೂ ಅವಕಾಶ ನೀಡದ ಪ್ರಾಂಶುಪಾಲರ ವರ್ತನೆಗೆ ತೀವ್ರವಾದ ಟೀಕೆ ವ್ಯಕ್ತವಾಗಿದೆ.