Slide
Slide
Slide
previous arrow
next arrow

ಜಿಲ್ಲೆಯ ಮೂವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

300x250 AD

ಕಾರವಾರ: ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಜಿಲ್ಲೆಯ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಜೊಯಿಡಾ ತಾಲ್ಲೂಕಿನ ಅಣಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಕ್ಷತಾ ಬಾಸಗೋಡು, ಹೊನ್ನಾವರ ತಾಲ್ಲೂಕಿನ ಬೇರಂಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಹರಿಕಂತ್ರ, ಚಿತ್ತಾರ ಮಂಕಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪ್ರಕಾಶ್ ನಾಯ್ಕ ಇವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆ.5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಹಿಳಾ ಶಿಕ್ಷಕರಿಗೆಗೆ ಅಕ್ಷರಮಾತೆ ‘ಸಾವಿತ್ರಿಬಾಯಿ ಪುಲೆ’‍ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಹೊನ್ನಾವರ ತಾಲೂಕಿನ ಮಂಕಿ ಚಿತ್ತಾರ ಸರ್ಕಾರಿ ಪ್ರೌಡಶಾಲೆಯ ಆಂಗ್ಲಭಾಷಾ ಸಹ ಶಿಕ್ಷಕ ಪ್ರಕಾಶ ನಾಯ್ಕ, ಮೂಲತಃ ಕುಮಟಾ ತಾಲೂಕಿನ ಅಳ್ವೆದಂಡೆಯ ದಿ.ದಯಾನಂದ ನಾಯ್ಕ ಹಾಗೂ ಶಾಂತಿ ನಾಯ್ಕ ಇವರ ಪುತ್ರ. 2004ರಲ್ಲಿ ಶಿಕ್ಷಕರಾಗಿ ಹಾಸನ ಜಿಲ್ಲೆಯ ಅರಕಲಗೂಡು ಸರ್ಕಾರಿ ಶಾಲೆಯಲ್ಲಿ ಸೇವೆ ಆರಂಭಿಸಿ, ಕಾರ್ಕಳದ ಬೈಲುರು, 2015ರಿಂದ ತಾಲೂಕಿನ ಚಿತ್ತಾರ ಪ್ರೌಡಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಚಿತ್ತಾರ ಶಾಲೆಗೆ ಆಗಮಿಸಿದ ನಂತರದಿ0ದ ಇದುವರೆಗೂ ಎಸ್‌ಎಸ್‌ಎಲ್‌ಸಿಯಲ್ಲಿ ನೂರು ಶೇಕಡಾ ಫಲಿತಾಂಶ ಬರುವಲ್ಲಿ ಇವರು ಕಾರಣೀಕರ್ತರಲ್ಲಿ ಓರ್ವರು ಎಂದರೆ ತಪ್ಪಾಗಲಾರದು. ಶೈಕ್ಷಣಿಕವಾಗಿ ಸಾಧನೆಗೆ ಪೂರಕವಾಗಿ ಇಂಗ್ಲೀಷ್ ಭಾಷಾ ಬೇಸಿಗೆ ಶಿಬಿರ, ತಂತ್ರಜ್ಞಾನ ಅಧರಿತ ಶಿಕ್ಷಣ, ಚಟುವಟಿಕೆ ಅಧಾರಿತ ಶಿಕ್ಷಣ, ಶಿಕ್ಷಣದಲ್ಲಿ ರಂಗಕಲೆ ಅಳವಡಿಕೆಯ ವಿನೂತನ ಯೋಜನೆ ಜಾರಿಗೆ ತಂದರು.
ಇಲಾಖೆಯ ಸಾಹಿತ್ಯ ರಚನೆಯಲ್ಲಿ ಕೂಡುಗೆ ನೀಡುತ್ತಾ ಬಂದಿರುವ ಇವರು ಜಿಲ್ಲಾ ವರ್ಕ ಬುಕ್ ಸಮಿತಿ, ರಾಜ್ಯ ಸುರ್ಪಿಮೆಂಟ್ ಬುಕ್ ಸಮಿತಿ, ವಿಭಾಗೀಯ ಗುರು ಪ್ರೇರಣ ಸಮಿತಿ, ಸಿಸಿಎ ಪುಸ್ತಕ ಸಮಿತಿಯ ಸದಸ್ಯರಾಗಿ, ಜಿಲ್ಲಾ ಹಾಗೂ ತಾಲೂಕು ಸಂಪನ್ಮೂಲ ವ್ಯಕ್ತಿಯಾಗಿ, ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಯಾಗಿ ಟಿವಿಯಲ್ಲಿ ನೇರಪ್ರಸಾರದಲ್ಲಿ, ಪೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಇಲಾಖಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ವೃತ್ತಿಯ ಜೊತೆಗೆ ಇಂಗ್ಲೀಷ್ ಭಾಷೆಯ ಗ್ರಾಮರ್, ಕಾಫಿ ಪುಸ್ತಕ, ಮೂಲ ಕಲಿಕಾ ಸಾಮರ್ಥ್ಯ ಪುಸ್ತಕ, ಗೃಹ ಆಧಾರಿತ ಕಲಿಕಾರ್ತಿ ಕೈಪಿಡಿ ಪ್ರಕಟಗೊಂಡಿದೆ. ಆರಕ್ಕೂ ಅಧಿಕ ನಾಟಕಗಳ ನಿರ್ದೇಶನ ಮಾಡಿದ್ದು, ರಾಜ್ಯದ ವಿವಿಧೆಡೆ ಪ್ರದರ್ಶನಗೊಂಡಿದೆ.

ಹೊನ್ನಾವರ ತಾಲೂಕಿನ ಬೇರಂಕಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಡಿ.ಹರಿಕ0ತ್ರ, ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ರಂಗಭೂಮಿ, ಯಕ್ಷಗಾನ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಅಳಿಲುಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಇಲಾಖೆಯ 2015-16ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು.
ಮಂಕಿ ಹೊಸಹಿತ್ತದಲ್ಲಿ ಬಡ ಮೀನುಗಾರ ಕುಟುಂಬದಲ್ಲಿ ಜನಿಸಿದ ಇವರು, ಬಡತನದ ಬೇಗುದಿ ಅನುಭವಿಸುತ್ತಾ ಸ್ನಾತಕೋತ್ತರ ಪದವಿ ಗಳಿಸಿದರು. 2003ರಲ್ಲಿ ಸುಳಗೇರಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಚಿತ್ತಾರ ಶಾಲೆಗೆ ಬಂದು ಸಮುದಾಯದ ಸಹಭಾಗಿತ್ವದಲ್ಲಿ ಶಾಲಾಭಿವೃದ್ಧಿ, ಸುವರ್ಣ ಮಹೋತ್ಸವ ಆಚರಣೆ, ಶಾಲಾ ಪ್ರವೇಶದ್ವಾರ ಮತ್ತು ಕಂಪ್ಯೂಟರ್ ದೇಣಿಗೆ ಪಡೆಯುವಿಕೆ, ವಿಶೇಷ ಯೋಜನೆಯಡಿಯಲ್ಲಿ ಹೈಸ್ಕೂಲ್ ಮಂಜೂರಾತಿ, ಅರಣ್ಯ ಇಲಾಖೆಯ ಜಾಗವನ್ನು ಶಾಲೆಯ ಖಾತೆಗೆ ವರ್ಗಾಯಿಸಲು ಶ್ರಮಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೌಷ್ಠಿಕ ಆಹಾರ ವಿಷಯದಲ್ಲಿ ದೆಹಲಿಯಲ್ಲಿ ಎನ್‌ಜಿಓಗಳ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಮಹಿಳೆ, ಮಕ್ಕಳು ಹಾಗೂ ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ ಮೂಡಿಸಿದರು. ಸಾಹಿತ್ಯ, ನಾಟಕ, ವ್ಯಕ್ತಿ ಚರಿತ್ರೆ, ಕಾನೂನು, ಕಥಾಸಂಕಲನ, ಕವನ ಸಂಕಲನ ಇತ್ಯಾದಿ ವಿಷಯಗಳ ಕುರಿತು ಹತ್ತು ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿ, ನಿರ್ದೇಶಕರಾಗಿ, ಪ್ರಸಂಗ ಕರ್ತರಾಗಿ ಶ್ರೀಕ್ಷೇತ್ರ ಜಿನ್ನೋಡ ಮಹಿಮೆ, ಶ್ರೀಕ್ಷೇತ್ರ ನೀಳ್ಕೊಡು ಮುಂತಾದ ಕೃತಿ ರಚಿಸಿ ಸಾಹಿತ್ಯವಲಯದ ಗಮನ ಸೆಳೆದಿರುವುದು ವಿಶೇಷವಾಗಿದೆ.

300x250 AD

ಅಕ್ಷತಾ ಕೃಷ್ಣಮೂರ್ತಿಯವರು ಜಿಲ್ಲೆಯ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಹಾಗೂ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಯಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿಯೆಂತoದೆರೆ ಮೂಗು ಮುರಿಯುವ ಕೆಲವರ ನಡುವೆ ಅಕ್ಷತಾ ಕೊಂಚ ವಿಭಿನ್ನ. ಇವರು ಹುಲಿ ಸಂರಕ್ಷಿತ ಅಣಶಿ ಅಭಯಾರಣ್ಯದ ಬುಡಕಟ್ಟು ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ. ಮಾತೃಭಾಷೆ ಕೊಂಕಣಿಯಾದರೂ ಕುಣಬಿ ಮಕ್ಕಳಿಗೆ ಕನ್ನಡ ಕಲಿಸಲು ಕ್ಲೇ ಮಾಡೆಲಿಂಗ್ ಸೇರಿದಂತೆ ವಿವಿಧ ಪರಿಣಾಮಕಾರಿ ವಿಧಾನಗಳನ್ನ ಅನುಸರಿಸಿ ಅಕ್ಷರ ಪಾಠ ಮಾಡುತ್ತಿದ್ದಾರೆ.
ಅಂಕೋಲಾ ತಾಲೂಕಿನ ಬೇಲೆಕೇರಿಯ ಇವರು, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಥೆ, ಗಝಲ್, ವಿಮರ್ಶೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಕ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕಸಾಪದಿಂದ 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಕಳೆದ 12 ವಷ್‌ಗಳಿಂದ ಗಾಂವಕರ ಫೌಂಡೇಶನ್‌ನಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top