ಅಂಕೋಲಾ: ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಲ್ಲಿ, ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಮಾದರಿಯಾದ ಅಂಕೋಲಾ ಸಾರಿಗೆ ಘಟಕದ ಕುಶಲಕರ್ಮಿ ಸಿಬ್ಬಂದಿ ಸುಬ್ರಮಣ್ಯ .ಆರ್. ಬಂಟ ಅವರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಶಿ ವಿಭಾಗದ ವತಿಯಿಂದ ಉತ್ತಮ ಸಿಬ್ಬಂದಿ ಪ್ರಶಂಸನಾ ಪ್ರಶಸ್ತಿ ಪ್ರದಾನಿಸಲಾಗಿದೆ.
ಶಕ್ತಿ ಯೋಜನೆ ಅನುಷ್ಠಾನದಿಂದ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿ ದಿನ ತಾಂತ್ರಿಕ ಸಿಬ್ಬಂದಿಗೆ ಹೆಚ್ಚಿನ ಒತ್ತಡ ಇದ್ದಾಗಿಯೂ ಸಹ, ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಅತಿ ಹೆಚ್ಚು ದಿನ ಕಾರ್ಯ ನಿರ್ವಹಿಸಿ ಮಾದರಿಯಾದ ಎಸ್.ಆರ್.ಬಂಟ ಅವರ ಶ್ರಮವನ್ನು ಗುರುತಿಸಿ ಶಿರಸಿ ವಿಭಾಗದ ವತಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಗದು ಸಹಿತ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಪಟ್ಟಣದ ಅಂಬಾರಕೊಡ್ಲದವರಾದ ಎಸ್.ಆರ್.ಬಂಟ ಅವರು ಕಳೆದ 26 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಶ್ಲಾಘನೀಯ ಸೇವೆಯನ್ನು ಗುರುತಿಸಿದ ಸಾರಿಗೆ ಇಲಾಖೆ ಎರಡು ಭಾರಿ ಸ್ವಾತಂತ್ರೋತ್ಸವ ಗೌರವ ಹಾಗೂ 2 ಭಾರಿ ಮಾದರಿ ಕಾರ್ಮಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗೆ ಎಸ್.ಆರ್. ಬಂಟ ಅವರು ಉತ್ತಮ ಕ್ರೀಡಾಪಟುವು ಆಗಿ ಸಾಧನೆ ಮೆರೆದಿದ್ದಾರೆ.
ಉತ್ತಮ ಸಿಬ್ಬಂದಿ ಪ್ರಶಸ್ತಿಯನ್ನ ಅಂಕೋಲಾ ಡಿಪೋದ ಸಹಾಯಕ ಕಾರ್ಯ ಅಧೀಕ್ಷಕ ಹರೀಶ ಖಾರ್ವಿ ನೀಡಿ ಗೌರವಿಸಿದರು. ಘಟಕದ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ, ಎಟಿಎಸ್ ಶಿವಾನಂದ ನಾಯ್ಕ, ಲೆಕ್ಕಾ ಪತ್ರಾಧಿಕಾರಿ ಡಿ.ಎನ್. ನಾಯ್ಕ ಉಪಸ್ಥಿತರಿದ್ದರು.