ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಹಾಗೂ ಆರೋಗ್ಯ ಶಿಕ್ಷಣ ಮತ್ತು ಔಷಧಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಇಕೋ ಕೇರ್( ರಿ ) ಸಂಸ್ಥೆ, ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಜಿಲ್ಲಾ ಶಾಖೆ ಉತ್ತರ ಕನ್ನಡ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಜಯಶ್ರೀ ಹೆಗಡೆ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸದೃಢ ಆಂತರಿಕ ಹಾಗೂ ಬಾಹ್ಯ ಆರೋಗ್ಯ ಕಾಪಾಡಿಕೊಳ್ಳುವುದು ಮಕ್ಕಳಿಗೆ ಅತ್ಯಂತ ಅವಶ್ಯವಾಗಿರುವುದು ಎಂದು ಅಭಿಪ್ರಾಯಪಟ್ಟರು. ಆಹಾರ ಸುರಕ್ಷತಾಧಿಕಾರಿ ಅರುಣ್ ವಿ. ಕಾಶಿಭಟ್ ಮಾತನಾಡಿ, ಅಸುರಕ್ಷಿತ ಆಹಾರ ಸೇವನೆಯಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕಿಡಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ, ಜಿಲ್ಲಾ ಶಾಖೆಯ ಅಧ್ಯಕ್ಷ ಮಹೇಶ್ ಡಿ. ನಾಯಕ, ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಸಂಧ್ಯಾ ಖರೆ, ಅಧ್ಯಕ್ಷರು SDMC ಹಾಗೂ CRP ದಿವ್ಯಶ್ರೀ ಕಾನಳ್ಳಿ, ಅತಿಥಿಗಳಾದ ಮಹೇಶ್ ಗಾಳಿಮನೆ ಮಾತನಾಡಿ ಹಿಂದುಳಿದ ಶಾಲೆಗಳಲ್ಲಿ ಈ ರೀತಿ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ವಿದ್ಯಾ ಕುಡಾಲಕರ ಮುಖ್ಯೋಪಾಧ್ಯಾಯರು, ಪಾಲಕರು, ಸೇವಾ ಮನೋಭಾವನೆ ಹೊಂದಿದ ಜಗದೀಶ್ ನಾಯ್ಕ್ ಹಾಗೂ ಸಹ ಶಿಕ್ಷಕರು ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವೈದ್ಯಕೀಯ ಪ್ರತಿನಿಧಿ ರಾಜೇಶ್ ವೆರ್ಣೇಕರ್ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿರುವ ಔಷಧಗಳ ಕುರಿತು ಮಾಹಿತಿ ನೀಡಿದರು. ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ರಮೇಶ್ ಬಿ.ನಾಯ್ಕ್, ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಇಕೋ ಕೇರ್, ಅಧ್ಯಕ್ಷ ಸುನೀಲ ಭೋವಿ ವಂದನಾರ್ಪಣೆ ಮಾಡಿದರು.