ಗೋಕರ್ಣ: ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಉಜ್ವಲವಾಗಿಸಿಕೊಳ್ಳಬೇಕಾದರೆ ಉತ್ತಮ ಓದು ಮತ್ತು ಸಂಸ್ಕಾರ ಅಳವಡಿಸಿಕೊಳ್ಳಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ಪಾಲಕರ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಪುಣ್ಯಾಶ್ರಮದ ರಾಜಗೋಪಾಲ ಅಡಿ ಗುರೂಜಿ ಅವರು ಹೇಳಿದರು.
ಇಲ್ಲಿಯ ಭದ್ರಕಾಳಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಎನ್ಎಸ್ಎಸ್ ಹಾಗೂ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಪ್ರಸಕ್ತ ಸಾಲಿನಲ್ಲಿ ಪಿಯುಸಿ ವಿಭಾಗದಲ್ಲಿ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಂಡ ಪ್ರತಿಯೊಬ್ಬ ವಿದ್ಯಾರ್ಥಿಗಳಿಗು ತಲಾ 500 ರೂ. ನಂತೆ 22 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು. ಕೆನರಾ ಶಿಕ್ಷಣ ಪ್ರಸಾರಕ ಮಂಡಳಿ ಕಾರ್ಯದರ್ಶಿ ಜಿ.ಎನ್.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಅಳವಡಿಸಿಕೊಳ್ಳಬೇಕಾದರೆ ಇಂತಹ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರು ವೇದಿಕೆ ಮೇಲೆ ನಿಂತು ಮಾತನಾಡುವ ಸಾಮರ್ಥ್ಯ ಹೊಂದಿದಾಗ ಮಾತ್ರ ನಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಸಾಧ್ಯ ಎಂದರು.
ಗೋಕರ್ಣ ಕೆನರಾ ಬ್ಯಾಂಕಿನ ವ್ಯವಸ್ಥಾಪಕರ ಈರಣ್ಣ ಬಟ್ಕೂರ್ಕಿ, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಎಸ್. ಲಮಾಣಿ, ಕೆ.ಎಸ್.ಪಿ. ಮಂಡಳದ ಕೋಶಾಧ್ಯಕ್ಷ ರವೀಂದ್ರ ಕೊಡ್ಲೆಕೆರೆ, ಭದ್ರಕಾಳಿ ಹೈಸ್ಕೂಲಿನ ಸಿ.ಜಿ. ನಾಯಕ ಮಾತನಾಡಿದರು. ಪ್ರಾಚಾರ್ಯ ಎಸ್.ಸಿ. ನಾಯ್ಕ ಸ್ವಾಗತಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ರಾಮಮೂರ್ತಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಉಪನ್ಯಾಸಕ ರೋಹಿತ ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕಿ ಪಲ್ಲವಿ ಹೆಗಡೆ ನಿರ್ವಹಿಸಿದರು. ರಾಜಶೇಖರ ಭಾಗೇವಾಡಿ ವಂದಿಸಿದರು.