ಕಾರವಾರ: ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ದುಡಿಯುವ ವರ್ಗಕ್ಕೆ ತಲುಪಿಸುವ ಉದ್ದೇಶದಿಂದ ಗುರುವಾರ ಚೆಂಡಿಯಾ ಗ್ರಾಮದಲ್ಲಿ ರೋಜಗಾರ್ ದಿವಸ್ ಆಚರಿಸಿ ಕೂಲಿಕಾರರಿಗೆ ಯೋಜನೆಯ ಕುರಿತು ಮಾಹಿತಿ ವಿನಿಮಯ ಮಾಡಲಾಯಿತು.
ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯತ್‌ನ ಸಾರ್ವಜನಿಕ ಸ್ಥಳದಲ್ಲಿ ಗುರುವಾರ ರೋಜಗಾರ್ ದಿವಸ್ ಆಚರಿಸಿ ಕೂಲಿಕಾರರಿಗೆ ನೀಡಲಾಗುವ ಕೂಲಿ ಹಣ, ಕೆಲಸದ ಅವಧಿ, ಕಾಮಗಾರಿ ವಿಧಗಳು ಸೇರಿದಂತೆ ಕೆಲಸದ ವೇಳೆ ನೀರು, ನೆರಳು, ಹಾಗೂ ಶಿಶುಪಾಲನೆಯನ್ನು ಕೈಗೊಳ್ಳಲು ಅನುಕೂಲ ಕಲ್ಪಿಸಲಾಗುವುದು ಎಂಬುದನ್ನು ತಿಳಿಸಲಾಯಿತು. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಟಿ.ಸಿ ಮಾತನಾಡಿ, ನೀವು ಹಾಗೂ ನಿಮ್ಮ ಸುತ್ತಲಿನ ಪ್ರತಿಯೊಬ್ಬರು ಉದ್ಯೋಗ ಚೀಟಿ ಪಡೆದು ನರೇಗಾದಡಿ ಉದ್ಯೋಗ ಪಡೆಯಿರಿ, ವರ್ಷಪೂರ್ತಿ ಉದ್ಯೋಗ ನೀಡಲಾಗುತ್ತದೆ. ಜೊತೆಗೆ ಊರಿನ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಜಲಮೂಲಗಳ ಸಂರಕ್ಷಣೆ, ಹಾದಿ ಬೀದಿಗಳು ಜನಾಕರ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಯೋಜನೆ ಸಹಕಾರ ನೀಡುತ್ತಿದೆ ಎಂದರು.
ದುಡಿಯುವ ಕೈಗಳಿಗೆ ಕೆಲಸ ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಯೋಜನೆಯು ಮುಂದಾಗಿದ್ದು, ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಜೊತೆಗೆ ರೈತರಿಗೆ ಅನುಕೂಲವಾಗುವಂತೆ ತೋಟಗಾರಿಕೆ, ಕೃಷಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಕಾಮಗಾರಿಗಳನ್ನು ನೀಡಲಾಗುತ್ತದೆ ಇದರ ಸದುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಶ್ ಅರಗೇಕರ್ , ಸದಸ್ಯರಾದ ರಾಜೇಶ ನಾಯ್ಕ್ ಹಾಗೂ ಪೂಜಾ ನಾಯ್ಕ್, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.