ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಉತ್ತರ ಕನ್ನಡ ಹಾಗೂ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ ವಿಂಗ್ ವತಿಯಿಂದ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಉಪನ್ಯಾಸಕರಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಶ್ರೀ ಪ್ರೇಮಕುಮಾರ ಮಾತನಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳವುದು ನಮ್ಮ ಜವಾಬ್ದಾರಿ ತಂಬಾಕು ಸೇವನೆಯಿಂದ ಧ್ವನಿ ಪೆಟ್ಟಿಗೆ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹೀಗೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯುವ ಜನತೆ ತಂಬಾಕು ಸೇವನೆ ಮಾಡದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಕೇಂದ್ರದ ಇನೋರ್ವ ಅಧಿಕಾರಿಯಾದಂತಹ ನದಾಫ್ ಆರ್ ಮಾತನಾಡಿ ತಂಬಾಕುಗಳOತಹ ವ್ಯಸನಕ್ಕೆ ಬಲಿಯಾಗಬೇಡಿ ಇವುಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಕೇಶವ ಕೆ.ಜಿ ಮಾತನಾಡಿ ನಮ್ಮ ಬದುಕು ನಮ್ಮ ಕೈಯಲ್ಲಿದೆ ಆರೋಗ್ಯಕ್ಕೆ ಮಾರಕವಾಗಿರುವ ವ್ಯಸನವನ್ನು ರೂಢಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಕ್ಯಾನ್ಸರ್ನಂತಹ ಮಹಾಮಾರಿ ರೋಗಕ್ಕೆ ಬಲಿಯಾಗಬೇಕಾಗುತ್ತದೆ ಎಂದರು. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ದಿವೇಕರ ಕಾಲೇಜಿನ ಬಿ.ಕಾಂ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಿ.ಸಿ.ಎ ಮುಖ್ಯಸ್ಥ ಡಾ. ಹರೀಶ್ ಕಾಮತ್ ನಿರೂಪಿಸಿದರು. ಯೂಥ್ ರೆಡ್ ಕ್ರಾಸ್ ಕಾರ್ಯಕ್ರಮಧಿಕಾರಿ ಸುರೇಶ ಗುಡಿಮನಿ ವಂದಿಸಿದರು.